ಗುರುವಾರ, ಮಾರ್ಚ್ 25, 2010

ಕಾವ್ಯ ಕಂಬನಿ


ಇದು ಇಪ್ಪತ್ತು ದಿನಗಳ ಹಿಂದೆ ನಮ್ಮನ್ನೆಲ್ಲ ಅಗಲಿದ ಮಹಾನ್ ಚೇತನ ನನ್ನ ತಂದೆ ಸೂರ್ಯನಾರಾಯಣ ಭಟ್ಟರಿಗೆ ಸಲ್ಲಿಸಿದ ಕಾವ್ಯ ಕಂಬನಿ.

ಬದುಕ ಪಯಣವ ಮುಗಿಸಿ ಕಣ್ಣಿಂದ ಮರೆಯಾದ
ಭಾವಗಳ ಹೊಮ್ಮಿಸುತ ಜ್ಞಾನಸೂರ್ಯ.
ದಿನವು ಬೆಳಕನು ಚೆಲ್ಲಿ ಜನಮನದಿ ದೊರೆಯಾದ
ಹೊಣೆಹೊತ್ತು ನಡೆಸಿರಲು ಹಲವು ಕಾರ್ಯ.

ಅಕ್ಷರ ಬರೆದು ಶಿಕ್ಷಣದ ತೊರೆಯಾಗಿ
ಹರಿದಿರಲು ಹಲವು ಕಡೆ ಶಾಲೆ ಕಟ್ಟಿ.
ತನದೆ ಶಿಸ್ತಿನ ನಡೆಗೆ ಬದ್ಧತೆಗೆ ಸೆರೆಯಾಗಿ
ಶಿಷ್ಯರೆದೆಯಲಿ ಸ್ಥಾನ ಪಡೆದು ಗಟ್ಟಿ.

ಕಲೆಗೆ ಅದ್ಯತೆ ನೀಡಿ ಪ್ರತಿಭೆಗಳ ಮೆರೆಸಿರಲು
ಸಾಂಸ್ಕೃತಿಕ ಜೀವನಕೆ ತಾಯಿಬೇರು.
ಚೇತನದ ಹನಿಹನಿಸಿ ಸಾಹಿತ್ಯ ಬರೆಸಿರಲು
ನಾಡೆಲ್ಲ ನುಗ್ಗಿರಲು ಕಾವ್ಯತೇರು.

ದೇವಮಂದಿರದಲ್ಲಿ ಭಕ್ತಿಯಲಿ ನೆರವಾಗಿ
ನರನೆ ನಾರಾಯಣನ ಮೂರ್ತಿರೂಪ.
ಸತ್ಯಜೀವನ ನಡೆಸಿ ಸತ್ಯಕ್ಕೆ ತಲೆಬಾಗಿ
ಸಂಸ್ಕಾರ ತೈಲದಲಿ ಉರಿಸಿ ದೀಪ.

ಮುದ್ದು ಮಡದಿಯ ಮೌನ ಮನೆಯಲ್ಲಿ ತುಂಬಿರಲು
ಕರೆಯಬಾರದೆ ಒಮ್ಮೆ ಪದ್ಮ ಎಂದು.
ಸದ್ದು ಮಾಡದೆ ಜೀವ ನಿಮ್ಮನ್ನೆ ನಂಬಿರಲು
ಧರೆಗೆ ಉರುಳಿರೆ ಕೋಟಿ ಕಣ್ಣ ಬಿಂದು.

ಕೋಟಿ ಶಿಷ್ಯೋತ್ತಮರ ನಮನಗಳು ಸಂದಿರಲು
ಶಾಶ್ವತವು ಭುವಿಯೊಳಗೆ ಪಡೆದ ಕೀರ್ತಿ.
ಉರಿದ ಜ್ವಾಲೆಯ ದೀಪ ಕ್ಷಣದೊಳಗೆ ನಂದಿರಲು
ಮುಟ್ಟಲಾರೆವು ಮಟ್ಟ ಹೆಣಗಿ ಪೂರ್ತಿ.

ಮಹಿಳೆ ಮಕ್ಕಳ ಮೇಲೆ ಗೌರವವ ಇರಿಸಿರಲು
ದೊರಕಿರಲು ದೊರೆ ನಿಮಗೆ ಸ್ಥಾನ ಗಣ್ಯ.
ಜನರು ಕೊಂಡಾಡುತಿರೆ ಜನಮನವ ವರಿಸಿರಲು
ಇಂಥ ಶಿಕ್ಷಕ ಬರಲು ನಮ್ಮ ಪುಣ್ಯ.

ಮಕ್ಕಳೆಡೆಗಿನ ಪ್ರೀತಿ ನುಡಿಸುವಲಿ ತೋರಿರಲು
ಜಾತಿ ಮತಗಳ ಗಣನೆ ಇರದ ಭೇದ.
ಸಮತೆ ಕಲಿಸುವ ರೀತಿ ಮಕ್ಕಳಲು ತೂರಿರಲು
ಕಠಿಣ ಶಿಕ್ಷೆಯ ಸಹಿತ ನೀಡಿ ಬೋಧ.

ಬರುವ ಸಾವನು ತಿಳಿದು ಪೂರ್ವದಲೆ ಕೂಡಿರಲು
ವಸ್ತ್ರಧನ ವಸ್ತುಗಳು ಮಣ್ಣ ಕುಂಭ.
ಶವಕೆ ಹೊದೆಸುವ ವಸನ ಸಂಗ್ರಹಿಸಿ ಇಟ್ಟಿರಲು
ಸ್ವಾವಲಂಬನೆ ಮೆರೆದು ಕಣ್ಣ ತುಂಬ.

ದೇಹ ಸುಟ್ಟಿರೆ ಚಿತೆಯು ಸುಡುವುದೇ ನೆನಪುಗಳ
ಮನದ ಮಹಡಿಯ ನೀವು ಅಗಲಲಿಲ್ಲ.
ದಾಹ ಓದುವ ಮೋಹ , ಬೆಳೆಸುತಲಿ ಕನಸುಗಳ
ನನಸು ಮಾಡುವ ಛಲದ ಜ್ಞಾನ ಮಲ್ಲ.

ಕ್ಷಣದಲ್ಲಿ ಭಸ್ಮವನು ಮಾಡುವಲಿ ಚಿತೆಯಿತ್ತು
ಆಗಸವ ಮುಟ್ಟಿತ್ತು ಪ್ರಖರ ಬೆಂಕಿ.
ಹಿಂತಿರುಗಿ ಬರುವಾಗ ಮೌನವನು ಮುರಿದಿತ್ತು
ಗುಣಗಾನ ಮೀರಿತ್ತು ಸಿಗದೆ ಅಂಕಿ.

ಬಳಗ ನಿಂದಿರಲಿಂದು ಮೌನಕೇ ಶರಣಾಗಿ
ನೆನಪಿನಾಳದ ಚಿತ್ರ ಹೊರಕೆ ತೆಗೆದು.
ಕೊಳಗ ಕಣ್ಣೀರಮಳೆ ಸುರಿಸುತಲಿ ಬಂದಿಹರು
ಹುಟ್ಟಿಬರಲಿಂಥವರು ಮನದಿ ಬಗೆದು.