ಶುಕ್ರವಾರ, ಸೆಪ್ಟೆಂಬರ್ 11, 2009

ಸೌರ ಅಭಯ


ಇದು ನನ್ನ ಸೋಲಾರ ಗೀತೆಗಳು ಕವನಸಂಕಲದಿಂದ ಆಯ್ದ ಕವನ. ಸೋಲಾರ‍್ ಎನರ್ಜಿಯ ಕುರಿತಾಗಿ ೩೭ ಕವನಗಳನ್ನು ಒಳಗೊಂಡಿರುವ ಈ ಸಂಕಲನಕ್ಕೆ ಶತಾವಧಾನಿ ಆರ‍್. ಗಣೇಶ್ ಅವರು ಮುನ್ನುಡಿ ಬರೆದು ಹರಸಿದ್ದಾರೆ.

ಜಗದ ದೊಡ್ಡ ಹೆದರಿಕೆ
ಬೇಗ ಮುಗಿವ ಇಂಧನ
ಬಗೆದು ಹಾಕಿ ಬೆದರಿಕೆ
ಸೌರ ಶಕ್ತಿ ಮುಂದಿನ

ಜಗವನಾಳಿ ಮೆರೆವ ಸೊಕ್ಕು
ಗಟ್ಟಿ ತೈಲದೊಡೆಯನು
ಸೌರಪಾಳಿ ಮಾಡಿ ನಕ್ಕು
ತಟ್ಟಿ ನಮ್ಮ ತೊಡೆಯನು


ಶಕ್ತಿ ಸ್ವಂತ, ದೇಶಕಿರದೆ
ಅರ್ಥ ಬರೀ ಅತಂತ್ರ
ಬದಲಿ ರೂಪ ಕಾಣಬೇಕು
ಆಗ ದೇಶ ಸ್ವತಂತ್ರ


ಬತ್ತುತಿರಲು ತೈಲ ಬಾವಿ
ದರವು ಮುಟ್ಟಿ ಮುಗಿಲು
ಒತ್ತ ಬೇಕು ಸೌರ ಕೋವಿ
ದಾಸ್ಯ ಸುಟ್ಟು ಭುಗಿಲು.


ಮನೆಮನೆಯಲಿ ನಡೆಯ ಬೇಕು
ಸೌರಶಕ್ತಿ ಭೋದನೆ
ಕೈಗೆಟಕುವ ದರದಿ ಬೇಕು
ಸೌರಕರಣ ಶೋಧನೆ

ಈಗ ನಾವು ಎಚ್ಚರಾಗಿ
ಸೌರ ಬೀಜ ಬಿತ್ತಲು
ಮುಂದೆ ಜಗವು ಬೀಳದಿರಲಿ
ಹಗಲು ಬಾವಿ ಕತ್ತಲು.