ಬುಧವಾರ, ಡಿಸೆಂಬರ್ 2, 2009

ಸಚಿನ್ ತೆಂಡುಲ್ಕರ್

ಬಯಲಲಿ ಇರೆ ಇಪ್ಪತ್ತು ದಾಖಲೆಯಾಗಿರೆ ಎಪ್ಪತ್ತು

ಸವ್ಯಸಾಚಿ ಸಚಿನ್ ಗೆ ಶುಭಕಾಮನೆಗಳು

ವಿಶ್ವವು ಬೆಚ್ಚುವ ಎಸೆವನು ಮೆಚ್ಚುವ

ಕ್ರಿಕೆಟ್ಟಿನಾಟದ ಮಾರ

ರಭಸದಿ ಚೆಚ್ಚುವ ಹಳತನು ಮುಚ್ಚುವ

ಧರೆಯಲೆ ದಾಖಲೆ ಶೂರ.

ಆಡಲು ಬರುತಿರೆ ನೋಡಲು ಈಧರೆ

ಹರ್ಷೋದ್ಗಾರದ ಗಾಳಿ

ಬಯಲಲಿ ಕರಗಲು ಮನದಲಿ ಮರುಗಲು

ಬಾಡುತ ಮುಖ ಎದುರಾಳಿ.

ಸೂಕ್ಷ್ಮದಿ ವೀಕ್ಷಿಸಿ ಕ್ಷೇತ್ರವ ರಕ್ಷಿಸಿ

ಆಡುವ ವೈಖರಿ ಚೆಂದ

ಓಟದ ಸುರಿಮಳೆ ಬರಿಸಲು ಈ ಇಳೆ

ಸಂತಸ ನೆರೆಯಲಿ ಬಂಧ.

ಅಟ್ಟುವ ಚೆಂಡಿನ ವೇಗವು ಗುಂಡಿನ

ಕ್ಷಣದಲಿ ಮುಟ್ಟಲು ನಾಕು

ಕುಟ್ಟುವ ರೀತಿಗೆ,ತಪ್ಪದ ನೀತಿಗೆ

ಜಗದಿರೆ ಮೆಚ್ಚುಗೆ ಸಾಕು.

ವೇಗದ ಎಸೆತಕೆ, ಎತ್ತಲು ಗಗನಕೆ

ಕಾಣದ ಚೆಂಡಿನ ಪಥವು

ಆರು ನಾಕುಗಳು ಸೇರಲು ಮೊತ್ತವು

ಮೆರೆಯಲು ದಾಖಲೆ ರಥವು.

ಟೀಕೆಯ ಮಾಡದೆ ದುರುದುರು ನೋಡದೆ

ಗಳಿಸಿರೆ ಎಲ್ಲರ ನೇಹ

ಸೋಲಲು ಬಾಡದೆ, ತೀರ್ಪಿಗೆ ಕಾಡದೆ

ಗೂಡನು ಸೇರುವ ಗೇಹ.

ಸಾವಿರ ಸಾವಿರ ಓಟವ ಕೂಡಲು

ವಿಶ್ವದ ಎತ್ತರ ವ್ಯಕ್ತಿ

ಆಟದ ಸಮಯದಿ ಮುಳುಗುತ ವಿನಯದಿ

ತೋರಲು ಅನುಪಮ ಭಕ್ತಿ.

ವಿಶ್ವವು ಮಣಿಯುವ ಹೆಮ್ಮೆಗೆ ಕುಣಿಯುವ

ಭಾರತ ಮಾತೆಯ ಪುತ್ರ

ಆಡಲುದಣಿಯನು ಆಡುತ ತಣಿಯನು

ದಾಖಲೆಗಗನದ ಮಿತ್ರ.

ದೈತ್ಯರ ದೇಹವ ಕಾಣುತ ಕ್ಷೇತ್ರದಿ

ದುರ್ಬಲನಾಗುತ ನಡುಗ

ಅಬ್ಬರದಲಿ ಹುಬ್ಬೇರಿಪ ಕ್ಷಾತ್ರದಿ

ಜಯಿಸುವ ನೀಲಿಯ ಹುಡುಗ.

ಎಸೆವನ, ರಾತ್ರಿಯ ಕನಸಲಿ ಬರುತಿರೆ

ಕೆಡಿಸುತ ಸೊಗಸಿನ ನಿದ್ದೆ

ಮರುದಿನ ನನಸಲಿ ದಾಂಡನು ತರುತಿರೆ

ಬೆವರಿಗೆ ಮೈಮನ ಒದ್ದೆ.

ಆಡುತ ಆಡುತ ಆಟದಿ ತೋರಲು

ಗಗನದಿ ಆರರ ಚಿತ್ರ

ನೋಡುತ ಜನಗಳ ಭಾವವೆ ಕಾಡಲು

ಕಳಿಸಲು ಮೆಚ್ಚುಗೆ ಪತ್ರ.

ನಲವತ್ತೈದನೆ ನೂರಿನ ದಾಖಲೆ

ಬರೆ ಏಕದಿನದ ಪಂದ್ಯ

ಹಿರಿಮೆ ಗರಿಮೆಗಳು ತೂರಿಬರುತಿರಲು

ಸಂತಸವೇರಿರೆ ವಿಂಧ್ಯ.

ನೂರರ ಕಟ್ಟನು ಟೆಸ್ಟಲಿ ತಟ್ಟಲು

ನಲವತ್ತೆರಡನೆಯ ಶತಕ

ಸ್ಫೂರ್ತಿಯ ಚಿಲುಮೆಗೆ ನಾಡಿನ ಒಲುಮೆಗೆ

ತೂಗಿರಿ ಸಚಿನರ ಫಲಕ.