ಮಂಗಳವಾರ, ಅಕ್ಟೋಬರ್ 9, 2012

ಇಂದು ಅಂಚೆಯ ದಿನ , ಅಂಚೆಯಣ್ಣನ ನೆನೆಯಿತು ನನ್ನ ಮನ

ಕೈ ಚೀಲ ಸೈಕಲ್ಲು ಮನೆ ಮುಂದಕೆ ಬೆಲ್ಲು
ಹೊಡೆದು ಕರೆವಾ ಗೆಳೆಯ ಅಂಚೆಯಣ್ಣ
ಹೊತ್ತು ಭಾವದ ಕೋಶ ಹೊರಗೆ ಖಾಕಿಯ ವೇಷ
ತೆಗೆದು ಕೈಗಿಡುವನು ಭಾವ ಬಣ್ಣ.

ಹಿಂದೆ ನಾ ಚಿಕ್ಕವನು , ಅಂಚೆಯವ ಸಿಕ್ಕವನು
ಕೊಡುತ್ತಿದ್ದ ಕೈಗೆ ಕೌತುಕದ ಪತ್ರ
ಸುಖ ದುಃಖ ಸಾಲುಗಳ ಜೀವನದ ಸೋಲುಗಳ
ಹೊರೆಹೊತ್ತು ಬರುತ್ತಿತ್ತು, ಬರೆದಿರಲು ಮಿತ್ರ.

ಅಂಚೆಯಣ್ಣನ ದಾರಿ ಕಾದು ಸಹನೆಯು ಮೀರಿ
ಬರದಿರಲು ಕೋಪವದು ಏರುತ್ತಿತ್ತು
ತಡವಾದರೂ ಬಿಡದೆ ಮನೆಬುಡಕೆ ಬಂದಾಗ
ಮನಮೆಚ್ಚಿ ಮೊಗದಿ ನಗೆ ಬೀರುತ್ತಿತ್ತು.

ಪ್ರೀತಿ ಗೌರವ ಹೆಚ್ಚಿ ಅಂಚೆಯಣ್ಣನ ಮೆಚ್ಚಿ
ಒಳಮನೆಯ ಸತ್ಕಾರ, ಓಲೆ ಸಿಹಿಗೆ.
ಅಂಚೆಯಣ್ಣನ ಜಪಿಸಿ , ಬರಲು ಮನದಲಿ ಶಪಿಸಿ
ಕೈಗಿಟ್ಟ  ಸಂದೇಶದಂಶ ಕಹಿಗೆ.

ಓಲೆ ಸರಕಿನ ಮರ್ಮ ತಿಳಿಯದಿರುವುದೇ ಧರ್ಮ
ಹೊರೆಹೊತ್ತು ನಡೆಯುವನು ಅಂಚೆಯಣ್ಣ
ನೆಂಟರೂರಿನ ಸುದ್ದಿ ಬರೆದ ನುಡಿಗಳ ತಿದ್ದಿ
ಕಳುಹುತಿಹ  ರಾಯಸದಿ ರಸದ ಗಿಣ್ಣ.

ಬಿಸಿಲಿರಲಿ ಮಳೆಯಿರಲಿ ನಡುಗುವಾ ಚಳಿಯಿರಲಿ
ಅಂಚೆ ತಲುಪಿಸುವಲ್ಲಿ ಕಾರ್ಯಕ್ಷಮತೆ
ಹಳ್ಳಕೊಳ್ಳದ ದಾರಿ ಬೆಟ್ಟ ತುದಿಗಳ ಏರಿ
ಹಳ್ಳಿಗಾಡಿನ ಜನಕೆ ತೋರಿ ಮಮತೆ.

ದೂರದೂರಿನ ಮಗನ ಓಲೆಯೋದಲು ಬರದ
ಜನಗಳಿಗೆ ಕ್ಷೇಮವನು ಓದಿ ಹೇಳಿ
ಮಾಸ ಮಾಸಕೆ ಬರುವ ಸರಕಾರಿ ಪಿಂಚಣಿಯ
ಸಲುವ ವ್ಯಕ್ತಿಗೆ ಕೊಡುವ ಸಹನೆ ತಾಳಿ.

ಮೆಸೇಜು ಈ ಮೈಲುಗಳು ಕ್ಷಣದಿ ಸಾವಿರ ಮೈಲು
ಚಲಿಸಿ, ಪತ್ರದ ಸ್ಥಾನ ಕಸಿದು ಮೆರೆದು.
ಮಂದಗತಿಯಲೆ ಬರಲು ಹೃದಯ ಜೊತೆಯಲೆ ತರಲು
ಪತ್ರ ಒಳಸೇರುವುದು ಮನವ ತೆರೆದು.

ಮಾಡಿ ಪತ್ರದ ರೂಡಿ, ಪೆಟ್ಟಿಗೆಯ ಒಳ ದೂಡಿ
ಸ್ವೀಕರಿಸಿ, ಅನುಭವಿಸಿ ಅಂಚೆ ಸುಧೆಯ.
ಪತ್ರ, ಬಳಗದಿ ಗಂಟ ಬೆಸೆಯುತಲಿ ಸವಿನಂಟ
ಕ್ಷಣದೊಳಗೆ ಎದೆಯಲ್ಲಿ ಭಾವದುದಯ.

ಅಂಚೆಯಾ ದಿನದಂದು ಅಂಚೆಯಣ್ಣಗೆ ಒಂದು
ನಮನವನು ಮಾಡೋಣ ಪ್ರೀತಿ ತೋರಿ
ದಿನದ ವಿದ್ಯುನ್ಮಾನ ಮಾಧ್ಯಮದ  ಹೊರಗೊಮ್ಮೆ
ಅಂಚೆಯಲಿ ವ್ಯವಹರಿಸಿ ಎಲ್ಲಸೇರಿ .