ಶುಕ್ರವಾರ, ನವೆಂಬರ್ 4, 2011

ಹಕ್ಕಿ-ಹೂವು


ಹೂವಿಗೆ ಇಲ್ಲ ಬರ
ಹಸಿರು ಇಲ್ಲದಿದ್ದರೂ ಇದೆ ಉಸಿರು
ಒಣಗಿದ ಕೊಂಬೆ ಇಟ್ಟಂತೆ ಗೊಂಬೆ
ತುಂಬೆಲ್ಲ ಕಂಗೊಳಿಪ ಹಕ್ಕಿ ಹೂವು
ವಿಶ್ರಮಿಸಿ ಕೊಡುತ್ತವೆ ಕಾವು .
ಹೂವು ಅರಳುತ್ತವೆ ,
ರೆಕ್ಕೆ ಬಿಚ್ಚಿದಾಗ
ಮೊಗ್ಗಾಗುತ್ತವೆ , ಮುಚ್ಚಿದಾಗ
ರೆಂಬೆಗೊಂದರಂತೆ ಲೆಕ್ಕ , ಅರಳುವ ದಳಗಳೆ ಪುಕ್ಕ
ಹೂವಿಗೆ ಚಲನೆಯಿದೆ ಅತ್ತಿತ್ತ ಬಾಗುತ್ತವೆ
ಮತ್ತೆ ಕೂಗುತ್ತವೆ
ಪುನಃ ಸ್ವಸ್ಥಾನಕ್ಕೆ ಮರಳುತ್ತವೆ
ಹೂವು ಹಣ್ಣಾಗಿ ಬೀಜ ಕೊಡುವಂತೆ
ಹೂಹಕ್ಕಿ ಹಾಡಿ ಕೂಡಿ
ಬಿಳಿಹೂವ ಬೆಳೆಯುತ್ತವೆ
ಎಲ್ಲರ ಸೆಳೆಯುತ್ತವೆ.

ಶುಕ್ರವಾರ, ಏಪ್ರಿಲ್ 8, 2011

ಭಾವ - ಬಣ್ಣ

ಕರಿಯನಾದರೆ ಏನು ಸ್ವಚ್ಛಂದ ಪ್ರೀತಿಯಿರೆ
ಬದುಕು ಸಾರ್ಥಕಗೊಳಲು ಬಣ್ಣ ಬೇಕೆ ?
ಬಿಳಿಯ ಬಣ್ಣದ ತೊಗಲು ಒಲವು ಒಣಗಿರುವ ಕೆರೆ
ಭಾವ ಬಾಯಾರಿಕೆಗೆ ಬಣ್ಣ ಸಾಕೆ?

ಬಣ್ಣಗಳು ಬದುಕನ್ನು ಹಸನುಗೊಳಿಸುವುದಿಲ್ಲ
ಪ್ರೀತಿ ನೇಗಿಲು ಉಳಲು ಭಾವ ಬೆಳೆಯು
ಸಹಜತಯು ಮುತ್ತುತಿರೆ ಮಣ್ಣಗುಣ ಮೆತ್ತುತಿರೆ
ಮೂಲ ಸಾರವ ಹೀರಿ ಬರಲು ಕಳೆಯು.

ಬಣ್ಣಗಳು ಮೂಲದಿಂ ಬಂದಿರಲು ಬದಲಿಸಲು
ಸಾಧ್ಯವಾಗದು ಸದ್ಯ, ಭಾವ ಮುಖ್ಯ
ಜೀವನದ ಕುಣಿಕೆಯಲಿ ಭಾವವೆಮ್ಮೆಣಿಕೆಯಲಿ
ಒಲವಿನಲಿ ಬೆಸಗೊಳಲು ಬೇಕು ಸಖ್ಯ.

ಕರಿಯನೋ ಬಿಳಿಯಳೋ ಬಣ್ಣಗಳು ಬೇಕಿಲ್ಲ
ಬಾಳು ಸಿಂಗರಗೊಳಲು ದ್ವೇಷ ನೂಕಿ
ಬಿಳಿಯಳೋ ಕರಿಯನೋ ಭಾವಗಳು ಯಾಕಿಲ್ಲ
ಬಾಳಬೇಕಿರುವ ದಿನ ಮೂರು ಬಾಕಿ.

ಒಲವು ಒಡಲೊಳಗಿರಲು ಮೈಬಣ್ಣವೆಂತಿರಲಿ
ಬಣ್ಣದೋಕುಳಿಯಾಟ ಬದುಕರಂಗ
ನಲವಸವಿ ನವಿಲಗರಿ ಮನದಲ್ಲಿ ಬಿಚ್ಚದಿರೆ
ಬಣ್ಣಬಣ್ಣದ ಕನಸು ಪೂರ್ಣ ಭಂಗ.

ಸೋಮವಾರ, ಏಪ್ರಿಲ್ 4, 2011

ಚೈತ್ರಚುಂಬನ


ತಂಬೆಲರ ಕಾಡಿನಲಿ
ಪರಿಮಳದ ಜಾಡಿನಲಿ
ಕೋಗಿಲೆಯ ಹಾಡಿನಲಿ
ಚಿಗುರು ಚುಂಬನ ತುಟಿಯ ತುಂಟಿ ಚೈತ್ರ

ಬಣ್ಣ ಬಣ್ಣದ ಉಡುಪು
ತುಂಬು ಫಲಗಳ ಹಿಡಿಪು
ಭಾವಜೀವಿಗೆ ಮುಡಿಪು
ಮನವ ಸಾವಿರ ಸೆಳೆದ ಚೆಲುವ ಜೈತ್ರ

ಇಡಲು ಚೆನ್ನಡಿ ಕೆಳಗೆ
ಸುರಿವ ಸುಮಗಳ ಮಳೆಗೆ
ಕಣ್ಣು ತುಂಬಲು ಕಳೆಗೆ
ಭುವನಸುಂದರಿ ಬರುವು ಕೊಟ್ಟ ಸುಳಿವು

ಆಗಸದ ಕಡುನೀಲಿ
ಹೂಗೊಂಚಲಿನ ಡೋಲಿ
ಪ್ರಾಯಪ್ರೇಮದ ಕೇಲಿ
ಮುಳುಗಿ ಏಳಲು ನವುರ ಹರಯ ಕೊಳವು

ಮಾವು ಬೇವಿನ ಚಿಗುರು
ಅರೆಗಾಯಿಗಳ ಒಗರು
ಘಮಿಪ ಮರಗಳ ಅಗರು
ಸೂರ್ಯ ರಶ್ಮಿಯು ಇಳೆಗೆ ಸುರಿವ ಝಳವು