ಶನಿವಾರ, ಜನವರಿ 9, 2010

ಮಹದೇವ

ರುದ್ರಭೂಮಿಯಲ್ಲಿನ ಮಹದೇವನ ಭದ್ರ ಬದುಕು
(ವಿಶ್ವೇಶ್ವರಭಟ್ಟರ ಅನಾಥ ಹೆಣಗಳನ್ನು ಚಿತಾಗಾರಕ್ಕೆ ಸಾಗಿಸುವ ಮಹದೇವನ ಕುರಿತಾದ ಲೇಖನದಿಂದ ಪ್ರೇರಿತ)
ಈತನ ಕಥೆಯನು ಕೇಳಿದ ಜನರಿಗೆ
ತುಂಬಲು ನೆಮ್ಮದಿ ಬಸಿರು
ಮಣ್ಣಲು ಶವಗಳು ಕಣ್ಣನು ಬಿಡುವವು
ಕೇಳಲು ಮಾದನ ಹೆಸರು.

ಬಡತನ ಕಾಡಲು ಹುಟ್ಟಿದ ಊರನು
ತೊರೆಯುವ ಘಳಿಗೆಯು ಬರಲು
ಒಡೆತನ ನೋಡಲು ದಿನಗಳ ದೂಡಲು
ಕಷ್ಟವು ಬಳಿಗೇ ಇರಲು

ತಾಯಿಯ ಜೊತೆಯಲಿ ಕೂಳನು ಅರಸುತ
ನಗರವ ಸೇರಿದ ಮಾದ
ರೋಗದಿ ಬಳಲಿದ ತಾಯಿಯು ಹರಸುತ
ಸೇರಲು ದೇವನ ಪಾದ.

ಮುಂದಿನ ಮಾರ್ಗವು ತೋರದೆ ಬದುಕಲಿ
ಕಾಡಲು ಊಟದ ಚಿಂತೆ
ಅನಾಥ ಹೆಣಗಳ ಹೂಳುವ ಕಾರ್ಯವು
ತರುತಿರೆ ಕಾಸಿನ ಕಂತೆ

ಜೀವನಸಾಗಲು ಆಸರೆಯಾಯಿತು
ಸರಕಾರಿ ದವಾಖಾನೆ
ಪಾವನಗೊಳ್ಳುವ ಜೀವನ ನಡೆಸಲು
ಹೊಟ್ಟೆಯಪಾಡ ನಮೂನೆ



ಅನಾಥ ಶವಗಳನ್ನೆತ್ತಿ ಸಾಗಿಸಲು
ಬರುವುದು ಮಾದನ ಗಾಡಿ
ವೈದ್ಯರು ಪರಿಕಿಸಿ ಒತ್ತಿ ಹೇಳಲು
ನಿಲ್ಲಲು ಬಡಿತವು ನಾಡಿ

ಬದುಕಿನ ಕಾಯಕ ಚರಮ ಗಾಯಕ
ದೀನರಪಾಲಿಗೆ ದಿಕ್ಕು
ಮುದುಕನು ಮಾದನು ಶಕ್ತಿಗೆ ಯುವಕನು
ಮಾಡನು ಎಂದೂ ಸೊಕ್ಕು

ಶವವನು ಎಳೆಯುತ ಮಸಣದ ಹಾದಿಯ
ಹಿಡಿವುದು ಮಾದನ ಅಶ್ವ
ತನ್ನವರಿಲ್ಲದೆ ಬದುಕುವ ಮಾದಗೆ
ಮರಣ ಮಸಣವೆ ವಿಶ್ವ

ಕುದುರೆಯು ಕೊನೆಯುಸಿರೆಳೆಯಲು ಮಿತ್ರರು
ಕೊಡಿಸಿದ ವಾಹನ ನಡೆಸಿ
ದೇವಕಾರ್ಯವನು ಕಂಡ ಮಿತ್ರರು
ಉಚಿತ ಇಂಧನವ ಬಡಿಸಿ

ದಿಕ್ಕು ತೋರದ ಶವಗಳ ನೋಡಲು
ಮಿಡಿಯುವ ಕರುಳಿನ ಬಳ್ಳಿ
ತನ್ನೊಡಹುಟ್ಟಿದರೆನ್ನುವ ಭಾವದಿ
ಸಾಗಿಸಿ ತಾಕಿಸಿ ಕೊಳ್ಳಿ

ಸಾವಿನ ಅರ್ಥವ ತಿಳಿಯದೆ ಕೇಳಲು
ಬಂದಿರೆ ತಾಯಿಯ ಸಾವು
ಜೀವನ ಪೂರ್ಣ ಸಾವಿನ ಜೊತೆಯಲಿ
ಕಳೆಯುತ ಗೆದ್ದಿರೆ ನೋವು

ಮಾನವನಾಗಿ ದೇವಗೆ ಸಮನಿರೆ
ಮಸಣಕೆ ಹೆಣಗಳ ಹೊತ್ತು
ಅಸಹ್ಯವೆಣಿಸದೆ ಜಾತಿಯ ಗಣಿಸದೆ
ಗತಿ ಇರದವರಾ ಸ್ವತ್ತು

ವರ್ಷಗಳುರುಳಲು ಕಾರ್ಯದಿ ತೊಡಗಲು
ಮನಸಿರೆ ಗಟ್ಟಿಯು ಮೊರಡು
ಹೆಣಗಳು ಮಸಣಕೆ ಸಾಗಿಹ ಮೊತ್ತವು
ಸಾವಿರ, ನಲವತ್ತೆರಡು

ಮಂದಿರ ನಿರ್ಮಿಸಿ ಮೂರ್ತಿಯ ಸ್ಥಾಪಿಸಿ
ಮಾಡದ ಮಾದನೆ ಗಣ್ಯ
ವಾರಸುದಾರನು ಶವಸಂಸ್ಕಾರಕೆ
ಗಳಿಸಿರೆ ಕೋಟಿಯ ಪುಣ್ಯ

ಸೇವೆಯ ಗುರುತಿಸಿ ಸಂಘ ಸಂಸ್ಥೆಗಳು
ನೀಡಿರೆ ಬಹುಪುರಸ್ಕಾರ
ತೃಪ್ತಿಯ ಹೊಂದಲು ಆಪ್ತಬಂಧುವು
ಮಾಡಲು ಶವಸಂಸ್ಕಾರ

ಪದಗಳ ನಮನವ ಸಲಿಸುವೆ ಬಾಗುತ
ತ್ರಿವಿಕ್ರಮ ಶ್ರೀ ಮಹದೇವ
ಸಾವಿರ ಹೆಣಗಳ ಸಾಗಿಸುತಿರಲು
ಸಾರ್ಥಕವಾಯಿತು ಜೀವ.

-ಸುಧಾಕಿರಣ್ ಅಧಿಕಶ್ರೇಣಿ