ಸೋಮವಾರ, ಅಕ್ಟೋಬರ್ 5, 2009

ಸತಿಯಾದ ಹೆಣ್ಣು

ಈ ಕವನ ೧೯೮೮ ರಲ್ಲಿ ಪ್ರಕಟವಾದ ನನ್ನ ಕವನಸಂಕಲನ "ಬೆಳ್ಳಿನೊರೆ" ಯದು. ಆಕಾಶವಾಣಿಯಲ್ಲಿ ಕೂಡ ಪ್ರಾಸಾರವಾಗಿದೆ.
ಸತಿಯಾದ ಹೆಣ್ಣು
ಪತಿಯೊಡನೆ ಹೊರಟಿಹಳು
ನೀರು ತುಂಬಿದ ಕಣ್ಣು
ಮೂಲೆಯನು ಹಿಡಿದಿಹಳು
ಕಡಿಯಲಾರದ ದಂಟು
ಹೆತ್ತಬಳ್ಳಿಯ ನಂಟು
ಹೇಳಲಾಗದ ಒಡಲು
ಹರಿದಿಹುದು ಅಳಲ ಬಿಳಲು
ಒಡಹುಟ್ಟಿದವರೊಡನೆ
ಹುಟ್ಟಿಬೆಳೆದೀ ತೌರ
ಒಡೆಯಲಾಗದೆ ಬಳಲಿ
ಕುಳಿತಿಹಳು ಕನಲಿ
ಪರ ಊರ ಹೊಸ ಜನರ
ಸೇರಿ ಬದುಕುವ ಚಿಂತೆ
ಮರೆಯಲಾಗದ ತವರ
ತೊರೆಯುವಳು ಏಕಾಂತೆ
ಪತಿ ತನಗೆ ತೌರೆಂದು
ಕಣ್ಣೊರೆಸಿ ಹೋರಡುವಳು
ಗತಿಯಿಂದ ಪತಿಯೂರ
ಹೆಣ್ಣಾಗಿ ಸೇರುವಳು.