ಬುಧವಾರ, ಆಗಸ್ಟ್ 8, 2012

ದ್ವಾಪರದ ಶ್ರೀಕೃಷ್ಣ ದೇವನೆನಿಸಿಲ್ಲ

ವಿಶ್ವಾಸ ಬೆಳೆಸಿರಲು ತಂತ್ರಗಳ ಬಳಸಿರಲು
ದ್ವಾಪರದ ಶ್ರೀಕೃಷ್ಣ ದೇವನೆನಿಸಿಲ್ಲ
ವ್ಯಾಪಿಸಿರೆ ಕಣಕಣದಿ ಸರ್ವಮಾನ್ಯದ ಗುಣದಿ
ಮನುಜ ಶಕ್ತಿಯೆ ಎನಲು ಅವಗೆ ಮುನಿಸಿಲ್ಲ.

ವಿಷದ ಮೊಲೆಯನು ಉಂಡು ಸಾಯಲೆಳೆಸದ ಗಂಡು
ಪೂತನಿಯ ಕೊಂದಿರಲು ಗುದ್ದಿಗುದ್ದಿ
ವಿಕ್ರಮವು ಪೋರನ ನವನೀತ ಚೋರನ
ಪುರವೆಲ್ಲ ತುಂಬಿರಲು ಹೆಮ್ಮೆ ಸುದ್ದಿ.

ಅಂಬೆಗಾಲಲಿ ಹರಿದು ಬೆಣ್ಣೆ ಗಡಿಗೆಯ ಸುರಿದು
ಹಾಲು ಮೊಸರಲೆ ಬೆಳೆದ ಮುದ್ದು ತುಂಟ
ಕೊಂಬೆ ರೆಂಬೆಯ ತರಿದು , ಮಣ್ಣ ಬಾಯಿಯ ತೆರೆದು
ಅಮ್ಮನನು ಬೆಚ್ಚಿಸಲು ತುಂಬಿ ಕಂಠ.

ವಿಷಕಾರಿ ಹಾವಿನ ಉಪಟಳವ ತಪ್ಪಿಸಲು
ಹೆಡೆತುಳಿದು ಹೆದರಿಸುತ ಓಡಿಸಿರಲು
ಭಯದ ಸೆರಗಿನಲಿದ್ದ ಪುರಜನರ ಬಿಡಿಸಿದ್ದ
ಹಾವುನೋವಿನ ರಗಳೆ ಝಾಡಿಸಿರಲು.

ಗೋಪಿಕೆಯ ಜಡೆ ಎಳೆದು ಮೈಗೆ ಬೆಣ್ಣೆಯ ಬಳಿದು
ಗೋಳಿನಾಟವ ಆಡಿ ಮೆರೆದ ಪುಂಡ
ಜಳಕದಲಿ ಗೋಪಿಯರ ಕಂಡು ಪುಳಕಿತನಾಗಿ
ವಸ್ತ್ರಗಳ ಅಪಹರಿಸಿ ಕರೆದ ಭಂಡ.

ಏದು ರಕ್ಕಸ ತಂಡ ಕಾದು ದನಗಳ ಹಿಂಡ
ಹೈನುಗಾರಿಕೆಯರ್ಥ ತಿಳಿದ ಪೋರ
ಪ್ರೀತಿ ಮಳೆಯನು ಸುರಿಸಿ ಹಾಲು ಹೊಳೆಯನು ಹರಿಸಿ
ಗೋಕುಲವ ತಣಿಸಿರುವ ತಂತ್ರಗಾರ.

ವ್ಯವಹಾರ ಚತುರನಿವ ವ್ಯಾಪಾರ ಹೆಚ್ಚಿಸಿರೆ
ಗೋಕುಲದ ತುಂಬೆಲ್ಲ ಅರ್ಥ ಸಂಮೃದ್ಧಿ
ಪರ್ವತದ ಕೊಡೆ ಹಿಡಿದು ಇಂದ್ರನನು ನಾಚಿಸಿರೆ
ಪ್ರಕೃತಿಪೂಜೆಗೆ ನೀಡಿ ಚಲನೆ ಸುದ್ದಿ.

ಬೆಣ್ಣೆ ಕರಗಲು ಕೈಗೆ ಕೊಳಲು ಬಂದಿರೆ ಮೈಗೆ
ಹುಡುಗಾಟ ಹೊರಹೋಗಿ ಹರಯ ಬಂದು
ಅತೃಪ್ತ ರಾಧೆಯನು ನುಡಿಸಿ ಸವಿ ಸೋದೆಯನು
ಶೃಂಗಾರ ಯಮುನೆಯಲಿ ದಿನವು ಮಿಂದು.

ಕೊಳಲು ಕೈಯೊಳಗಿರಲು ಬಿಡದು ಪ್ರೇಮದ ನೆಳಲು
ಅರಿತು ಕೊಳಲನು ಇಡಲು ರಾಧೆಯಳಲು
ತ್ಯಾಗದಲಿ ಸಾಧನೆಯು ನೆನಪಿರಲು ವೇದನೆಯು
ಬಿಟ್ಟು ಹೊರಡಲು ಸ್ಮರಣೆ ಹೆಜ್ಜೆ ಮಳಲು.

ಮಾವ ಕಂಸನ ಕೊಲದೆ ಮಥುರ ನಗರಿಯ ಗೆಲದೆ
ಬದುಕು ದುಸ್ತರವಾಗಿ ಕಂಸವಧೆಯು
ಬಿಡಿಸಿ ಒದಗಿದ ವ್ಯಾಜ್ಯ , ಕೊಡಿಸಿ ಅಜ್ಜಗೆ ರಾಜ್ಯ
ಕಲಿಕೆ ಸಾಂದೀಪಿನಿಯ ಜ್ಞಾನಸುಧೆಯು.

ರಾಜ್ಯವನು ಗೆಲಿಸುವುದು ರಾಜನನು ನಲಿಸುವುದು
ರಾಜನಾಗುವ ಆಸೆ ತೋರಲಿಲ್ಲ
ತಂತ್ರಗಳ ಹೂಡುತಲಿ ರಾಜನನು ಮಾಡುತಲಿ
ಎಲ್ಲು ಒಂದೆಡೆ ಇನಿತು ಕೂರಲಿಲ್ಲ.

ಪ್ರೌಢಿಮೆಯ ಹಲಹಂತ ಸಾಗುತಿರೆ ಧೀಮಂತ
ಬೆಣ್ಣೆ ಕೊಳಲದು ಕಳಚಿ ಚಕ್ರ ಬಂತು
ದುಷ್ಟ ಶಿಕ್ಷಣಕೆಂದು ಶಿಷ್ಟ ರಕ್ಷಣವೆಂದು
ಉಗ್ರತಂತ್ರದ ಕಾರ್ಯ ಮಾಡಿ ನಿಂತು.

ದೇವಕಿಯ ಸಂಜಾತ ,ರುಕ್ಮಿಣಿಯ ಸಂಪ್ರೀತ  
ಸತ್ಯಭಾಮೆಯ ನಿತ್ಯ ಮುದಗೊಳಿಸಿದವನು
ಮಹಿಳೆಯರ ಒಳಮನದ ಸೂಕ್ಷ್ಮತೆಗೆ ಸ್ಪಂದಿಸುತ
ಸಮತೆ ಭಾವವ ತೋರಿ ಹದಗೊಳಿಸಿದವನು.

ದ್ವಾರಕೆಯ ನಿರ್ಮಾಣ ವ್ಯವಹಾರ ಉಗ್ರಾಣ
ಅರ್ಥಕಲ್ಪನೆಗೊಂದು ನೀಡಿ ರೂಪ
ಕಡಲತೀರದ ನಗರಿ ವಹಿವಾಟುಗಳು ಚಿಗುರಿ
ಬಂದರಿನ ಬಾಂಧವ್ಯ ತಂದ ಭೂಪ.

ಬಡತನವ ಪ್ರತಿನಿಧಿಪ ಸುಧಾಮನಲಿ ಹುರುಪ
ತುಂಬಿ,ಮನೆಯಲಿ ಉಂಡು ಹಿಡಿಯ ಅವಲಕ್ಕಿ
ಸಂಕಷ್ಟದಲಿ ಅಂದು ದ್ರೌಪದಿಯು ಸಿಲುಕಿರಲು
ಅನ್ನ ಅಕ್ಷಯಗೊಳಿಸೆ  ಹರುಷ ಉಕ್ಕಿ,

ಯುದ್ಧರಂಗದಿ ನಿಂದು ಬಂಧುವೆನ್ನದೆ ಕೊಂದು
ಗೆಲುವ ಗುರಿಯಾಗಿಸಲು ನೀಡಿ ಸ್ಫೂರ್ತಿ
ಯುದ್ಧದುದ್ದೇಶವೇ ಗೆಲವು ಮಾತ್ರವೆ ಎಂದ
ಗುರುವಾಗಿ ಕ್ಷಣಕ್ಷಣದಿ ನಿಂತ ಮೂರ್ತಿ.

ಸಮರ ಸನ್ನದ್ಧನಿಗೆ ಅಳುವೇಕೆ ಅಳುಕೇಕೆ
ಯುದ್ಧ ನೀತಿಯ ಬಿಡದೆ ತುಡುಗು ಎಂದ
ಭ್ರಮರ ಮತಿಯದು ಬೇಡ ನಿಶ್ಚಯಿಸಿ ಗುರಿಮಾಡ
ದುಷ್ಟ ಸಂಹಾರವೇ ಮುಖ್ಯವೆಂದ.