ಮಂಗಳವಾರ, ಸೆಪ್ಟೆಂಬರ್ 7, 2010

ಗ್ರಹಣ ವಿಜ್ಞಾನ

ಬಾನಿನಂಗಳದಲ್ಲಿ ಚಣಕಾಲ ನಡೆಯುವುದು
ನೆಳಲು ಬೆಳಕಿನ ಚೆಲುವ ಆಟ
ನಯನಗಳ ಎದುರಿನಲಿ ನಯವಾಗಿ ತೋರುವುದು
ಗಗನ ವೈವಿಧ್ಯದಾ ಸವಿಯ ಊಟ.


ಯಾವುದೋ ವೇಗದಲಿ ಯಾವುದೋ ಜಾಗದಲಿ
ಸಂಧಿಸಲು ಕಾಯಗಳ ದಿನದ ಪಯಣ
ಸೇರುವಾ ದಿನಬರಲು ಸಂತಸದ ಸವಿತರಲಿ
ಗ್ರಹಣ ಗಗನದೆಡೆಗೆ ಹರಿವ ನಯನ.


ಭೂಮಿ ಸೂರ್ಯನ ನಡುವೆ ಚಂದ್ರ ಕುಣಿಯುತ ಬರಲು
ಸೇರುತಲಿ ಕಾಯಗಳು ಸರಳರೇಖೆ
ಚಂದ್ರನಾ ಇಡಿನೆರಳು ಭೋಮಿಯಲಿ ಬಿದ್ದಿರಲು
ಗ್ರಹಣದಧ್ಯಯನಕ್ಕೆ ತೆರೆದಶಾಖೆ.

ಅಡ್ಡನಾಗಲು ಚಂದ್ರ ರವಿಯ ಮರೆಯಾಗಿಸುತ
ಅರ್ಧಭೂಮಿಯ ಮೇಲೆ ಹಗಲುಮಾಯ
ನೆಳಲು ಬೆಳಕಲಿ ನಡೆವ ಚಿತ್ರವೈಚಿತ್ರ್ಯಕೆ
ಚಲನೆ ಕಾರಣ ಮೂಲ ಗಗನಕಾಯ.

ಗ್ರಹಣವಾಗುವ ಮೊದಲು ಬೆಳಕ ದೋಣಿಯನೇರಿ
ಯಾರೊ ಬಂದರು ನೆರಳ ಪರದೆ ಹಿಡಿದು
ಗ್ರಹಣ ಕರಗಲು ಹಿಡಿಯೆ ವಜ್ರದುಂಗುರ ತೋರಿ
ಮುಂದೆ ನಡೆದರು ಬೆಳಕ ಪ್ರೀತಿ ಮಿಡಿದು.

ಬೆಳಕ ಕಾಯಗೆ ಬೇಕು ಗ್ರಹಣವಾಗಲು ತಡೆಯು
ಅದಕೆ ಉಪಗ್ರಹದ ಬಲ ಸನಿಹವಿರಲು
ತಡೆಯು ಇಲ್ಲದೆ ಗ್ರಹಣ ಬರಿದೆ ನಿತ್ಯದ ಭ್ರಮಣ
ಸೊಗಸ ಸಂಪೂರ್ಣತೆಯು ಕೊರಗುತಿರಲು.

ಜಗದ ಕಾಯಕ ನಿತ್ಯ ಗಗನ ಕಾಯದ ಸತ್ಯ
ತಿಳಿಸುವುದು ಈ ತೆರನ ವಿದ್ಯಮಾನ
ಸಿಗಲು ಮಾಹಿತಿ ಇಂಥ ಸರಿಯುವುದು ಕತೆ ದಂತ
ಅಳಿಸುವುದು ಮೌಢ್ಯವನು ನೀಡಿ ಧ್ಯಾನ.

ಮೌಡ್ಯ ನಂಬಲುಬೇಡಿ ಸೂಕ್ಷ್ಮತನದಲಿ ನೋಡಿ
ರವಿಯ ನುಂಗಲು ಬಹನು ಕೇತುವಲ್ಲ
ಮೂಲ ಬೆಳಕಿನ ನಡುವೆ ಮರೆ ಇರಿಸುವಾ ನೆರಳು
ಗ್ರಹಣವಾಗಲು ಕೇತು ಹೇತುವಲ್ಲ.

ಬರಿಯ ಕಣ್ಣಲಿ ರವಿಯ ನೋಡುವುದು ನಿಲ್ಲಿಸಿರಿ
ಪ್ರಖರ ಬೆಳಕಿನ ಕಿರಣ ಸುಡಲು ಸಾಕು
ಪರಿಸರದ ಮೇಲೆಲ್ಲ ಪರಿಣಾಮ ಬೀರಿದರೆ
ಎಂದಿನಂತೆಯೆ ಬಾಳು ನಡೆಸಬೇಕು.

ಗುರುವಾರ, ಜುಲೈ 22, 2010

"ಸ್ಕೂಲಿನ ಅಸೆಂಬ್ಲಿಯಲ್ಲಿ ಓದಲು ಪ್ರಪಂಚದ ಏಳು ಅದ್ಭುತಗಳ ಬಗ್ಗೆ ಒಂದು ಕವನವನ್ನು ಬರೆದುಕೊಡು ಅಪ್ಪಾ" ಎಂಬ ಮಗಳ ಒತ್ತಾಯಕ್ಕೆ ಬರೆದ ಗೀತೆಯಿದು.


ಅದ್ಭುತ ಗೀತೆ

ವಿಶ್ವದಲ್ಲಿನ ಏಳು ಅದ್ಭುತ
ಪದ್ಯ ರೂಪದಿ ಹೇಳುವೆ
ಮನವು ಹರುಷಕೆ ಆಗಿ ಗದ್ಗದ
ನೆನಪನೊಮ್ಮೆಗೆ ಊಳುವೆ

ಗೀಜಾ ಪಿರಮಿಡ್ ಬಹಳ ಹಳೆಯದು
ನಂಬಿಕೆಯಾ ಪ್ರತೀಕವು
ಗ್ರೀಕ ದೇಶದ ಹೆಮ್ಮೆ ರಚನೆಯ
ನೋಡುತಿರೆ ಮನ ಮೂಕವು

ಮಾಚುಪಿಚ್ಚು ಇಂಕ ಜನರ
ಮನದ ಸಂಸ್ಕೃತಿ ತಿಳಿಸಲು
ಪೆರುವ ಜನಗಳ ನಾಗರೀಕತೆ
ಪ್ರಕೃತಿ ಪ್ರೇಮವ ಬೆಳೆಸಲು

ಚೀನ ದೇಶದ ಮಹಾಗೋಡೆಯ
ಒಮ್ಮೆಯಾದರು ನೋಡೆಯ
ಮನುಜ ನಿರ್ಮಿತ ಮಹದ್ರಚನೆಯ
ಹೃದಯ ತುಂಬಿ ಹಾಡೆಯ

ಇಟಲಿ ದೇಶದ ರೋಮ ನಗರದ
ರಂಗ ಮಂದಿರ ಸುಂದರ
ಕೊಲೆಸಿಯಂನ ಸೌಧ ವೈಭವ
ಜ್ಞಾನ ಕಲೆಗಳ ಹಂದರ

ಜೋರ್ಡನ್ ದೇಶದ ಪೆಟ್ರ ಕೆತ್ತನೆ
ನೋಡೆ ಮೈ ನವಿರೇಳಲು
ಮರಳ ಕಲ್ಲಲಿ ಕಲೆಯ ಬಿತ್ತನೆ
ಸಂಸ್ಕೃತಿಯ ಸವಿ ಹೇಳಲು

ಬ್ರೆಜ಼ಿಲ್ ದೇಶದ ಕ್ರಿಸ್ತ ಪ್ರತಿಮೆಯು
ಗಾತ್ರದಲಿ ಇರೆ ತಾರಕ
ಶಾಂತಿ ಮಂತ್ರವ ಪಠಿಸಿ ನಿಂತಿರೆ
ಒಲವ ಜಗದೋದ್ಧಾರಕ

ನಮ್ಮ ದೇಶದ ಹೆಮ್ಮೆ ನೋಡಲು
ಮನವು ತುಂಬುತ ನಲಿವುದು
ತಾಜಮಹಲಿನ ಕೀರ್ತಿಹಾಡಲು
ಷಹಜಹಾನಗೆ ಸಲುವುದು

ಮನುಜಯತ್ನದ ಏಳು ಅದ್ಭುತ
ಹೀಗೆ ಕವನದಿ ಹಾಡಿದೆ
ಕಾಲಧನುಜನ ವಿಕಟ ದಾಳಿಗೆ
ಬಿರುಕು ಕೆಲವೆಡೆ ಮೂಡಿದೆ.

ಬುಧವಾರ, ಜೂನ್ 9, 2010

ಮುಂಗಾರು ಮಳೆ

ಮುಂಗಾರು ಮೆಲ್ಲಗೆ ಅಡಿಯಿಡುತ್ತಿದೆ . ಇಪ್ಪತ್ತೆರಡು ವರ್ಷಗಳ ಹಿಂದೆ ಬರೆದ ನನ್ನ ಮೊದಲ ಕವನ ಸಂಕಲನ " ಭಾವಧಾರೆ " ಯಲ್ಲಿದ್ದ ಈ ಕವನ , ನಿಮ್ಮ ಓದಿಗಾಗಿ -


ಎಡಬಿಡದೆ ಸುರಿಯುತಿದೆ
ಮುಂಗಾರ ಮೊದಲಮಳೆ
ಕುಡಿಯೊಡೆದು ಚಿಗುರುತಿದೆ
ಕಾದು ಕರಟಿರುವ ಗರಿಕೆ ನೆಲ

ಕವಿದ ಕಾರ್ಮೋಡಗಳ ಸೀಳುತಿದೆ
ಗುಡುಗು ಸಿಡಿಲುಗಳ ನಾರಾಚ
ಕಿವಿಗಪ್ಪಳಿಸುತಿದೆ ಬಿಡದೆ
ಭೋರ್ಗರೆವ ಮಳೆಯ ಅಹಿತರಾಗ

ಕವಿದ ಮೇಘಗಳ ಹಂದರಕೆ
ಹಗಲು ಇರುಳಾಗಿದೆ
ಸುರಿವ ಮಳೆಯ ಪ್ರಭಾವಕೆ
ತೊರೆಯುಕ್ಕಿ ಪ್ರವಹಿಸುತ್ತಿದೆ

ಝರಿಯ ಹನಿಯ ನಿಬಿಡತೆಗೆ
ಗೂಡ ಸೇರಿವೆ ಜೀವ ಸಂಕುಲವು
ಹರಿವ ನದಿಯ ಚೆಲುವಿಕೆಗೆ
ನವಿರೇಳುತಿದೆ ಮೈಮನವು

ಉಗಿದೇಳ್ವ ಸಿಡಿಲ ಆರ್ಭಟಕೆ
ಬಿರುಕೊಡೆಯುತಿದೆ ಎದೆಯೊಳು
ಪುಟಿದೇಳ್ವ ಬುಗ್ಗೆಯಂದಕೆ
ಹಗುರಾಗುತಿದೆ ಹೃದಯವು.

ಬುಧವಾರ, ಜೂನ್ 2, 2010

ಮರುಜೀವ

ಜೀವಪಯಣದ ಹಾದಿಯಲಿ
ನೀನು ಜೊತೆಗಿರಲು
ಭಾವ ಅಡಗಿಹ ಗೋರಿಯಲಿ
ಹಲವು ಕತೆಯಿರಲು.

ನಿನ್ನ ಮೆಚ್ಚುತ ಹೇಳುವೆನು
ಭಾವ ಕೊಂದವರ
ನೆನಪ ಮರೆವಲಿ ಹೂಳುವೆನು
ಜೀವ ತಿಂದವರ

ಚೆಲುವನರಸುತ ಬಂದವನು
ಎಲ್ಲು ನಿಲಗೊಡದೆ
ಒಲವನಿರಿಸದೆ ಸಂದವನು
ರಮಿಸಿ ಛಲಬಿಡದೆ.

ತನ್ನ ದಾಹವು ನಿಲ್ಲುತಲಿ
ಬಿಟ್ಟು ಓಡಿಹನು
ಬೇರೆ ದೇಹವ ಮೆಲ್ಲುತಲಿ
ಮತ್ತೆ ಕೂಡಿಹನು.

ಕಣ್ಣು ಕಟ್ಟುತ ಮಗದೊಬ್ಬ
ಹಚ್ಚಿ ಹುಣ್ಣುಗಳ
ಕುಡಿಯ ಕಟ್ಟುತ ಹೋಗಿಹನು
ಹಲವು ಹೆಣ್ಣುಗಳ.

ಬಂಧಿಸೆನ್ನನು ಭೋಗಿಸಿದ
ಕರುಳು ಕಡಿವಂತೆ
ಚುಚ್ಚುಮಾತಲಿ ತಾಗಿಸಿದ
ಸರಳು ಸುಡುವಂತೆ.

ನಿನ್ನ ಪ್ರೀತಿಯ ಹೊಳೆಯಲ್ಲಿ
ಮಿಂದು ಕಳೆಯಾದೆ
ನೀನು ಬಿತ್ತಿದ ಬೆಳೆಯಲ್ಲಿ
ನಿಂದು ತಿಳಿಯಾದೆ.

ಬುಧವಾರ, ಮಾರ್ಚ್ 31, 2010

ಬಿಡದೀಮಾಯೆ

ಶಾಂತ ವಾತಾವರಣ
ಸುತ್ತಲೂ ಕಲ್ಲಿನ ಭದ್ರ ಆವರಣ
ಪಾಗಾರದ ಬಣ್ಣ ಕಾವಿ , ಮಡಿನೀರಿಗೊಂದು ಬಾವಿ.
ಬೇವು, ಬಿಲ್ವ,ಮುತ್ತುಗದ ಮರಗಳೇ ಸುತ್ತ
ಮಧ್ಯದಲ್ಲಿ ಎತ್ತರದ ಒಂದು ಹುತ್ತ

ಅಲ್ಲಲ್ಲಿ ತುಳಸಿ,ನೆಲ್ಲಿ ಪಾರಿಜಾತದ ಗಿಡಗಳು
ಅರ್ಚನೆಯಿಂದ ಕಂಗೊಳಿಸುವ ಬುಡಗಳು.
ತೇಲಿಬರುತ್ತಿರುವ ಭಕ್ತಿನಾಮದ ಇಂಪು
ಮಕರಂದ ಗಂಧವ ಉಜ್ಜುತ ಬೀಸುವ ಗಾಳಿಯ ತಂಪು
ಬೋಳುತಲೆಯ ವಟುಗಳ ಓಡಾಟ
ಮಂತ್ರಪಠಣದ ಪಾಠ.

ಹೊರಗೆ ಕವಿದಿದೆ ಭಕ್ತಿಯ ಮಂಜು
ಕಣ್ಣಿಗೆ ಕಾಣದ ನಂಜು
ಪೀಠ ಪಾಲಕ್ಕಿಗಳಲಂಕಾರ , ಹೊಮ್ಮುತ್ತಿದೆ ಓಂಕಾರ
ಪೀಠಕ್ಕೆ ಬಾಗಿಸಿಟ್ಟ ಮಂತ್ರದಂಡ
ಬಹುಪರಾಕಿಗೆ ನಿಂತ ಶಿಷ್ಯತಂಡ.

ಗುರುದರ್ಶನಕ್ಕೆ ಭಕ್ತರ ಸಾಲು,
ಅಲ್ಲಲ್ಲಿ ಹೊಳೆಯುತ್ತಿದೆ ವಿದ್ವಾಂಸರ ಶಾಲು.
ಮಣಿ, ಗಂಧ, ರುದ್ರಾಕ್ಷಿ - ಭಕ್ತಿಗೆ ಬೇಕೆ ಬೇರೆ ಸಾಕ್ಷಿ?
ಕಿವಿಗೆ ಅಪ್ಪಳಿಸುತಿದೆ ಭಕ್ತಿಯ ನದಿಯ ಭೋರ್ಗರೆತ
ಮುಕ್ತಿಯ ಮೊರೆತ.
ವಿಚಾರಿಗೂ ಬರುತ್ತದೆ ತಲೆತಿರುಕು
ಭಕ್ತಿಯ ಅಂಥ ಸರಕು!

ಆಶ್ರಮದ ತೇಜಸ್ಸಿನ ಸುಮುಖ
ನೋಡಿ ಕಾಮುಕನೂ ಆಗುವನು ವಿಮುಖ.
ಇಂತಿರಲು , ಪ್ರಾಕಾರದ ಒಳಗೆ ಬಂದಿದ್ದಾನೆ
ಒಬ್ಬ ಭಕ್ತ , ಪ್ರವೇಶ ಮುಕ್ತ .

ವೇದ ಶಾಸ್ತ್ರಗಳು ತಿಳಿದಿಲ್ಲ , ಜೀವನದಲೇನೂ ಉಳಿದಿಲ್ಲ
ಜಂಜಡಕೆ ಸಂಸಾರ ತ್ಯಜಿಸಿ ,ಮನದಿ ಸ್ವಾಮಿಯ ಭಜಿಸಿ

ಮುಕ್ತಿಗಾಗಿ ಬಂದಿದ್ದಾನೆ , ಮಠದೊಳಗೆ ನಿಂದಿದ್ದಾನೆ.

ಧ್ಯಾನಪೀಠದಲ್ಲಿ ಸ್ವಾಮಿ ಮಗ್ನ
ನಿಮಿರಿದ ಮೈ ನಗ್ನ
ನಾರಿಯಿಂದ ಮುಕ್ತಿಗೆ ದಾರಿ
ನಿರಂತರ ಮೈ ಒತ್ತು
ಉದುರುತ್ತಿರುವ ಮುತ್ತು.

ಹಗಲು, ತೆರಳಲು ಬೋಧನೆ
ರಾತ್ರಿ, ಕಾಮದ ವೇದನೆ
ರಾಸಲೀಲೆಗೆ ನಿವೇದನೆ ,
ಹಣದ ಅನುಮೋದನೆ.

ಪೀಠಬಿಟ್ಟು ಏರಿದ್ದಾನೆ ಮಂಚ
ತಲುಬಿನ ಪ್ರಪಂಚ
ಕುಪ್ಪಳಿಸುತ್ತಿದ್ದಾಳೆ ಸಿನೆಮಾ ತಾರೆ
ಜಾರುತ್ತಿದೆ ಆಕೆಯ ಸೀರೆ.

ಇಳಿಸಲವಳ ಉಬುಸ
ಕಳಚುತ್ತಿದ್ದಾನೆ ಕುಬುಸ
ಬೆಳಗಿ, ಅಣಿಮಾಡುತ್ತಾನೆ ಕಳಶವ ಕಾಮ ಪೂಜೆಗೆ.

ಧ್ಯಾನಪೀಠ - ಈಗ ಧಾನ್ಯಪೀಠ!
ಉತ್ತಲು , ಬಿತ್ತಲು ಹದಗೊಂಡಿದೆ ಗದ್ದೆ
ಶ್ರಮದ ಬೆವರಿಗೆ ಮೈ ಒದ್ದೆ.

ಹರಿಸಿ ನೋಟಿನ ಗರಿ
ಏರಿದ್ದಾನೆ ಪರಾಕಾಷ್ಠತೆಯ ಗಿರಿ
ಮುಗ್ಧಭಕ್ತರು ಯಾವಾಗಲೂ ಹರಕೆಯ ಕುರಿ.

ಕಾಮ ಕೊಸರಿತು ದಿಟ
ಕೆಸರಾಯಿತು ಮಠ.
ತೀರಿಸಿದ್ದಾನೆ ಅವಳ ಇಚ್ಚೆ
ಅಲ್ಲಿಗೆ ಸಂಪೂರ್ಣ ಉದುರಿತು
ನಿತ್ಯಾನಂದನ ಕಚ್ಚೆ.

ಇಷ್ಟಕ್ಕೂ , ಇಷ್ಟೆಲ್ಲಕ್ಕೂ ಅವನಿಗೆ ಮಠವೇ ಬೇಕಿತ್ತೆ?
ಬೇಕಿತ್ತು , ಬೆಲೆವೆಣ್ಣುಗಳ ಕರೆಸುವ ಅವನ ಮಠದ ತಾಕತ್ತು.
ಮುಕ್ತಿಗಾಗಿ ದರ್ಶನಕ್ಕೆ ಬಂದು ನಿಂತ

ಆ ಬಡಪಾಯಿ ವಿರಾಗಿ
ಓಡಿ , ಹೆಂಡತಿಯ ಪುನಃ ಸೇರಿ ಮರುಗಿ,
ನಿರ್ಧಾರಕ್ಕೆ ಬಂದಿದ್ದಾನೆ
ಬಿಡದೀ ಮಾಯೆ ಮಡದೀ ಕಾಯೆ.

ಗುರುವಾರ, ಮಾರ್ಚ್ 25, 2010

ಕಾವ್ಯ ಕಂಬನಿ


ಇದು ಇಪ್ಪತ್ತು ದಿನಗಳ ಹಿಂದೆ ನಮ್ಮನ್ನೆಲ್ಲ ಅಗಲಿದ ಮಹಾನ್ ಚೇತನ ನನ್ನ ತಂದೆ ಸೂರ್ಯನಾರಾಯಣ ಭಟ್ಟರಿಗೆ ಸಲ್ಲಿಸಿದ ಕಾವ್ಯ ಕಂಬನಿ.

ಬದುಕ ಪಯಣವ ಮುಗಿಸಿ ಕಣ್ಣಿಂದ ಮರೆಯಾದ
ಭಾವಗಳ ಹೊಮ್ಮಿಸುತ ಜ್ಞಾನಸೂರ್ಯ.
ದಿನವು ಬೆಳಕನು ಚೆಲ್ಲಿ ಜನಮನದಿ ದೊರೆಯಾದ
ಹೊಣೆಹೊತ್ತು ನಡೆಸಿರಲು ಹಲವು ಕಾರ್ಯ.

ಅಕ್ಷರ ಬರೆದು ಶಿಕ್ಷಣದ ತೊರೆಯಾಗಿ
ಹರಿದಿರಲು ಹಲವು ಕಡೆ ಶಾಲೆ ಕಟ್ಟಿ.
ತನದೆ ಶಿಸ್ತಿನ ನಡೆಗೆ ಬದ್ಧತೆಗೆ ಸೆರೆಯಾಗಿ
ಶಿಷ್ಯರೆದೆಯಲಿ ಸ್ಥಾನ ಪಡೆದು ಗಟ್ಟಿ.

ಕಲೆಗೆ ಅದ್ಯತೆ ನೀಡಿ ಪ್ರತಿಭೆಗಳ ಮೆರೆಸಿರಲು
ಸಾಂಸ್ಕೃತಿಕ ಜೀವನಕೆ ತಾಯಿಬೇರು.
ಚೇತನದ ಹನಿಹನಿಸಿ ಸಾಹಿತ್ಯ ಬರೆಸಿರಲು
ನಾಡೆಲ್ಲ ನುಗ್ಗಿರಲು ಕಾವ್ಯತೇರು.

ದೇವಮಂದಿರದಲ್ಲಿ ಭಕ್ತಿಯಲಿ ನೆರವಾಗಿ
ನರನೆ ನಾರಾಯಣನ ಮೂರ್ತಿರೂಪ.
ಸತ್ಯಜೀವನ ನಡೆಸಿ ಸತ್ಯಕ್ಕೆ ತಲೆಬಾಗಿ
ಸಂಸ್ಕಾರ ತೈಲದಲಿ ಉರಿಸಿ ದೀಪ.

ಮುದ್ದು ಮಡದಿಯ ಮೌನ ಮನೆಯಲ್ಲಿ ತುಂಬಿರಲು
ಕರೆಯಬಾರದೆ ಒಮ್ಮೆ ಪದ್ಮ ಎಂದು.
ಸದ್ದು ಮಾಡದೆ ಜೀವ ನಿಮ್ಮನ್ನೆ ನಂಬಿರಲು
ಧರೆಗೆ ಉರುಳಿರೆ ಕೋಟಿ ಕಣ್ಣ ಬಿಂದು.

ಕೋಟಿ ಶಿಷ್ಯೋತ್ತಮರ ನಮನಗಳು ಸಂದಿರಲು
ಶಾಶ್ವತವು ಭುವಿಯೊಳಗೆ ಪಡೆದ ಕೀರ್ತಿ.
ಉರಿದ ಜ್ವಾಲೆಯ ದೀಪ ಕ್ಷಣದೊಳಗೆ ನಂದಿರಲು
ಮುಟ್ಟಲಾರೆವು ಮಟ್ಟ ಹೆಣಗಿ ಪೂರ್ತಿ.

ಮಹಿಳೆ ಮಕ್ಕಳ ಮೇಲೆ ಗೌರವವ ಇರಿಸಿರಲು
ದೊರಕಿರಲು ದೊರೆ ನಿಮಗೆ ಸ್ಥಾನ ಗಣ್ಯ.
ಜನರು ಕೊಂಡಾಡುತಿರೆ ಜನಮನವ ವರಿಸಿರಲು
ಇಂಥ ಶಿಕ್ಷಕ ಬರಲು ನಮ್ಮ ಪುಣ್ಯ.

ಮಕ್ಕಳೆಡೆಗಿನ ಪ್ರೀತಿ ನುಡಿಸುವಲಿ ತೋರಿರಲು
ಜಾತಿ ಮತಗಳ ಗಣನೆ ಇರದ ಭೇದ.
ಸಮತೆ ಕಲಿಸುವ ರೀತಿ ಮಕ್ಕಳಲು ತೂರಿರಲು
ಕಠಿಣ ಶಿಕ್ಷೆಯ ಸಹಿತ ನೀಡಿ ಬೋಧ.

ಬರುವ ಸಾವನು ತಿಳಿದು ಪೂರ್ವದಲೆ ಕೂಡಿರಲು
ವಸ್ತ್ರಧನ ವಸ್ತುಗಳು ಮಣ್ಣ ಕುಂಭ.
ಶವಕೆ ಹೊದೆಸುವ ವಸನ ಸಂಗ್ರಹಿಸಿ ಇಟ್ಟಿರಲು
ಸ್ವಾವಲಂಬನೆ ಮೆರೆದು ಕಣ್ಣ ತುಂಬ.

ದೇಹ ಸುಟ್ಟಿರೆ ಚಿತೆಯು ಸುಡುವುದೇ ನೆನಪುಗಳ
ಮನದ ಮಹಡಿಯ ನೀವು ಅಗಲಲಿಲ್ಲ.
ದಾಹ ಓದುವ ಮೋಹ , ಬೆಳೆಸುತಲಿ ಕನಸುಗಳ
ನನಸು ಮಾಡುವ ಛಲದ ಜ್ಞಾನ ಮಲ್ಲ.

ಕ್ಷಣದಲ್ಲಿ ಭಸ್ಮವನು ಮಾಡುವಲಿ ಚಿತೆಯಿತ್ತು
ಆಗಸವ ಮುಟ್ಟಿತ್ತು ಪ್ರಖರ ಬೆಂಕಿ.
ಹಿಂತಿರುಗಿ ಬರುವಾಗ ಮೌನವನು ಮುರಿದಿತ್ತು
ಗುಣಗಾನ ಮೀರಿತ್ತು ಸಿಗದೆ ಅಂಕಿ.

ಬಳಗ ನಿಂದಿರಲಿಂದು ಮೌನಕೇ ಶರಣಾಗಿ
ನೆನಪಿನಾಳದ ಚಿತ್ರ ಹೊರಕೆ ತೆಗೆದು.
ಕೊಳಗ ಕಣ್ಣೀರಮಳೆ ಸುರಿಸುತಲಿ ಬಂದಿಹರು
ಹುಟ್ಟಿಬರಲಿಂಥವರು ಮನದಿ ಬಗೆದು.ಬುಧವಾರ, ಫೆಬ್ರವರಿ 24, 2010

ಸೋಲಾರ್ ವಾಟರ್ ಹೀಟರ್


ದಿನದ ಬಳಕೆ ಬಿಸಿನೀರಿಗೆ
ಬಳಸಿ ಸೌರ ಯಂತ್ರವ
ಭಜಿಸಿ ಸೌರ ಮಂತ್ರವ.

ಅಸ್ಥಿರತೆಯ ವಿದ್ಯುತ್ತಿಗೆ

ಹೂಡಿ ಈಗ ತಂತ್ರವ

ಹಾಡಿ ಬೇಗ ಅಂತ್ಯವ.ಧಕ್ಕೆ ಇಲ್ಲ , ರೊಕ್ಕವಿಲ್ಲ

ಬಿಸಿಲ ಹಿಡಿದು ಬಳಸಲು

ಅಸಲು , ತುಂಬ ಉಳಿಸಲು

ಹೆಚ್ಚು ಹಣವೂ ನಾಶವಾಗಿ

ವಿದ್ಯುತ್ ಬಿಲ್ ಕಟ್ಟಲು

ಸಿಟ್ಟು ಬಂದು ಮೆಟ್ಟಲು.ನಿನ್ನೆ ಕಾದ ನೀರು ಇಂದು

ಪೂರ್ಣ ಬಿಸಿ ಇರುವುದು

ಕ್ಷಣದಿ ಕೈಗೆ ಬರುವುದು.


ಅಡುಗೆ, ಸ್ನಾನ, ಬಟ್ಟೆ, ಪಾತ್ರೆ ,

ಮಾಡಿ ಮತ್ತೆ ತೊಳೆಯಲು

ಶುದ್ಧವಾಗಿ ಹೊಳೆಯಲು.


ಗೃಹ ಸಂಸ್ಥೆ ವಾಣಿಜ್ಯವೂ

ಸಾಕು, ಪಡದೆ ಅವಸ್ಥೆ

ಬಳಸಿರಿ ಈ ವ್ಯವಸ್ಥೆ.

ಸಹಿಸಿ ದಹಿಸಿ ಸಾಕಾಗಿದೆ

ಕೊಳ್ಳಿ ಸೌರ ಸೆಟ್ಟನು

ಕಂಡುಕೊಳ್ಳಿ ಗುಟ್ಟನು.


ಬುಧವಾರ, ಫೆಬ್ರವರಿ 17, 2010

ಒಂದು ಸಂಜೆ

ಮೋಡಗಳ ದಂಡು,ನಡುವೆ
ಕೆಂಪಿನ ಚೆಂಡು.
ತಾರೆಗಳ ಮಿಣುಕು,ಒಡವೆ
ಬರುತಿದೆ ಹಿಂಡು.
ಆಗಸದ ಮುಖದಿ, ಮೊಡವೆ
ಮುಗಿಲಿನ ತುಂಡು.
ಚೇತನಕೆ ಇನ್ನು ಜಡವೆ?
ದೃಶ್ಯವ ಕಂಡು.
ಜಿಗಿಯುತಿರೆ ಸಾಂಬ ಕಡವೆ
ಸವಿಯನುಂಡು

ಮಂಗಳವಾರ, ಫೆಬ್ರವರಿ 9, 2010

ಒಂದು ಬೆಳಗು

ಮುಗಿಲ ಹೆರಳಿಗೆ ಅರಳು
ಹಕ್ಕಿ ಹೂವಿನ ದಂಡೆ
ಗೌಜು ವಾಹನ ಶಬ್ದ
ಬಡಿದು ಎಬ್ಬಿಪ ಚಂಡೆ
ಕೆಲಸ ಬೆಟ್ಟವ ನೆನೆದು
ಕುದಿವ ದಿನದಾ ಮಂಡೆ

ಕಾಂಕ್ರೀಟು ಚಪ್ಪರದಿ
ಅಡಗಿ ಮಿರುಗುವ ತೊಂಡೆ
ಬಣ್ಣದೋಕುಳಿ ಚೆಲ್ಲಿ ಮತ್ತೆ
ಕರಗುವ ಹಂಡೆ
ನೀಲ ಬಯಲಲಿ ನಗುವ
ಜಗದ ದೇವನ ಕಂಡೆ

ಯಾವುದೂ ಗೋಜಿರದೆ
ಮಲಗಿಹವು ಕೆಲ ಬಂಡೆ
ಬೆಳಗು ಸೂರ್ಯನ ನೋಡು
ಒಮ್ಮೆಯಾದರು ಸಂಡೆ.

ಬುಧವಾರ, ಜನವರಿ 27, 2010

ಮುಹೂರ್ತದ ರಗಳೆ

ಆತ ನನ್ನನ್ನು ಮೆಚ್ಚಿದ್ದಾನೆ
ನಾನು ಆತನನ್ನು ಮೆಚ್ಚಿದ್ದೇನೆ
ಮೆಚ್ಚಿದ್ದನ್ನು ಬಿಚ್ಚಿಡಲು
ಭಯ ಮುಜುಗರದಿಂದ ಬಚ್ಚಿಟ್ಟಿದ್ದೇವೆ.

ದಿನವೂನನ್ನ ಕೊರಗು-ಸೊರಗು ಕಂಡು
ಬೆಂಕಿ, ಹೊಳೆ,ವಿಷ, ಹಗ್ಗಕ್ಕೆ ಹೆದರಿ
ಅಪ್ಪ ಒಪ್ಪುತ್ತಾನೆ.
ಅಪ್ಪ ಒಪ್ಪಿದ ತಪ್ಪಿಗೆ , ತೃಪ್ತಿಗೆ
ಶಾಸ್ತ್ರ ಮುಹೂರ್ತಕ್ಕೆ ಕಟ್ಟುಬೀಳಬೇಕು.
ಬೀಳುತ್ತೇನೆ.
ಮುಹೂರ್ತ ಗೊತ್ತುಪಡಿಸಿದ್ದಾರೆ
ಆದರೆ ಆ ಹೊತ್ತಿಗೆ
ಅತ್ತಿಗೆಗೆ ಒಂಬತ್ತು ತುಂಬುತ್ತದೆ!

ಸ್ವಲ್ಪ ದಿನಗಳ ನಂತರ ನೋಡಿದರೆ
ನನಗೆ ತಿಂಗಳ ಕಡ್ಡಾಯ ರಜೆ!
ಹೋಗಲಿ ಇವೆರಡನ್ನೂ ತಪ್ಪಿಸಿ ಇಟ್ಟಿದ್ದಾಗಿದೆ,
ಇನ್ನು ತೊಂದರೆಯಿಲ್ಲ.

ಸ್ವಲ್ಪ ತಡೀರಿ......
ಒಂದು ಸುದ್ದಿ-
ಮುಲೆ ಮನೆ ಮಹದೇವನನ್ನು
ಹಾಸಿಗೆ ಸಹಿತ ಹೊರಗೆ ತಂದಿದ್ದಾರಂತೆ.
ಛೇ- ನಾನು ಮಾಲೆ ಹಾಕೋದು
ಮುಲೇಮನೆ ಮಹದೇವನಿಗಲ್ಲ
ಆದರೆ ಶಾಸ್ತ್ರ ಕೇಳಬೇಕಲ್ಲ, ಇರಲಿ.

ರಜೆ, ಸೂತಕ, ವೃದ್ಧಿ-ಎಲ್ಲಾ ಕಳೀತು
ಇನ್ನು ನಿಶ್ಚಿಂತೆ ... ಮುಹೂರ್ತ
...........ಹುಡುಕಬಹುದು,

ಅಯ್ಯೋ , ಎಂಥಾ ಅವಸ್ಥೇ
ಅವರಿಂದ ಪತ್ರ ಬಂದಿದೆ
ಇಟ್ಟಿರೋ ದಿನದ ಎಡಬಲಕ್ಕೆ
ತಾಯಿ ಒಳಗೆ ಬರೋದಿಲ್ವಂತೆ

ಒಳ್ಳೇ ಗ್ರಹಚಾರ,
ಹಲ್ಲು ಇದ್ದರೆ ಕಡಲೆಯಿಲ್ಲ
ಕಡಲೆಯಿದ್ದರೆ ಹಲ್ಲಿಲ್ಲ
ದಿನ ಇಟ್ಟರೆ ಹುಟ್ಟು-ಸಾವು-ಮುಟ್ಟು
ಬಿಟ್ಟರೆ ದಿನ ಬೇಕಲ್ಲ

ಅಂತೂ ಒಂದು ಮುಹೂರ್ತ ಅಡ್ಡಿಯಿಲ್ಲವಂತೆ
ಬರುವ ಶುಕ್ರವಾರವಂತೆ
ಒಂದು ಕೆಲಸ , ಅವತ್ತು ಬೇಡ
ಆ ಶುಕ್ರವಾರದ ೧೧ ದಿನಕ್ಕೆ ಸರಿಯಾಗಿ ಇಟ್ಟರೆ
ನನ್ನ ಮಗೂಗೆ ನಾಮಕರಣವನ್ನೂ ಮಾಡಬಹುದು
ಏಕೆಂದರೆ , ನಾಳಿನ ಶುಕ್ರವಾರಕ್ಕೆ ನನಗೆ
ಒಂಭತ್ತು ಪೂರ್ಣ ತುಂಬುತ್ತೆ.

ಶನಿವಾರ, ಜನವರಿ 9, 2010

ಮಹದೇವ

ರುದ್ರಭೂಮಿಯಲ್ಲಿನ ಮಹದೇವನ ಭದ್ರ ಬದುಕು
(ವಿಶ್ವೇಶ್ವರಭಟ್ಟರ ಅನಾಥ ಹೆಣಗಳನ್ನು ಚಿತಾಗಾರಕ್ಕೆ ಸಾಗಿಸುವ ಮಹದೇವನ ಕುರಿತಾದ ಲೇಖನದಿಂದ ಪ್ರೇರಿತ)
ಈತನ ಕಥೆಯನು ಕೇಳಿದ ಜನರಿಗೆ
ತುಂಬಲು ನೆಮ್ಮದಿ ಬಸಿರು
ಮಣ್ಣಲು ಶವಗಳು ಕಣ್ಣನು ಬಿಡುವವು
ಕೇಳಲು ಮಾದನ ಹೆಸರು.

ಬಡತನ ಕಾಡಲು ಹುಟ್ಟಿದ ಊರನು
ತೊರೆಯುವ ಘಳಿಗೆಯು ಬರಲು
ಒಡೆತನ ನೋಡಲು ದಿನಗಳ ದೂಡಲು
ಕಷ್ಟವು ಬಳಿಗೇ ಇರಲು

ತಾಯಿಯ ಜೊತೆಯಲಿ ಕೂಳನು ಅರಸುತ
ನಗರವ ಸೇರಿದ ಮಾದ
ರೋಗದಿ ಬಳಲಿದ ತಾಯಿಯು ಹರಸುತ
ಸೇರಲು ದೇವನ ಪಾದ.

ಮುಂದಿನ ಮಾರ್ಗವು ತೋರದೆ ಬದುಕಲಿ
ಕಾಡಲು ಊಟದ ಚಿಂತೆ
ಅನಾಥ ಹೆಣಗಳ ಹೂಳುವ ಕಾರ್ಯವು
ತರುತಿರೆ ಕಾಸಿನ ಕಂತೆ

ಜೀವನಸಾಗಲು ಆಸರೆಯಾಯಿತು
ಸರಕಾರಿ ದವಾಖಾನೆ
ಪಾವನಗೊಳ್ಳುವ ಜೀವನ ನಡೆಸಲು
ಹೊಟ್ಟೆಯಪಾಡ ನಮೂನೆಅನಾಥ ಶವಗಳನ್ನೆತ್ತಿ ಸಾಗಿಸಲು
ಬರುವುದು ಮಾದನ ಗಾಡಿ
ವೈದ್ಯರು ಪರಿಕಿಸಿ ಒತ್ತಿ ಹೇಳಲು
ನಿಲ್ಲಲು ಬಡಿತವು ನಾಡಿ

ಬದುಕಿನ ಕಾಯಕ ಚರಮ ಗಾಯಕ
ದೀನರಪಾಲಿಗೆ ದಿಕ್ಕು
ಮುದುಕನು ಮಾದನು ಶಕ್ತಿಗೆ ಯುವಕನು
ಮಾಡನು ಎಂದೂ ಸೊಕ್ಕು

ಶವವನು ಎಳೆಯುತ ಮಸಣದ ಹಾದಿಯ
ಹಿಡಿವುದು ಮಾದನ ಅಶ್ವ
ತನ್ನವರಿಲ್ಲದೆ ಬದುಕುವ ಮಾದಗೆ
ಮರಣ ಮಸಣವೆ ವಿಶ್ವ

ಕುದುರೆಯು ಕೊನೆಯುಸಿರೆಳೆಯಲು ಮಿತ್ರರು
ಕೊಡಿಸಿದ ವಾಹನ ನಡೆಸಿ
ದೇವಕಾರ್ಯವನು ಕಂಡ ಮಿತ್ರರು
ಉಚಿತ ಇಂಧನವ ಬಡಿಸಿ

ದಿಕ್ಕು ತೋರದ ಶವಗಳ ನೋಡಲು
ಮಿಡಿಯುವ ಕರುಳಿನ ಬಳ್ಳಿ
ತನ್ನೊಡಹುಟ್ಟಿದರೆನ್ನುವ ಭಾವದಿ
ಸಾಗಿಸಿ ತಾಕಿಸಿ ಕೊಳ್ಳಿ

ಸಾವಿನ ಅರ್ಥವ ತಿಳಿಯದೆ ಕೇಳಲು
ಬಂದಿರೆ ತಾಯಿಯ ಸಾವು
ಜೀವನ ಪೂರ್ಣ ಸಾವಿನ ಜೊತೆಯಲಿ
ಕಳೆಯುತ ಗೆದ್ದಿರೆ ನೋವು

ಮಾನವನಾಗಿ ದೇವಗೆ ಸಮನಿರೆ
ಮಸಣಕೆ ಹೆಣಗಳ ಹೊತ್ತು
ಅಸಹ್ಯವೆಣಿಸದೆ ಜಾತಿಯ ಗಣಿಸದೆ
ಗತಿ ಇರದವರಾ ಸ್ವತ್ತು

ವರ್ಷಗಳುರುಳಲು ಕಾರ್ಯದಿ ತೊಡಗಲು
ಮನಸಿರೆ ಗಟ್ಟಿಯು ಮೊರಡು
ಹೆಣಗಳು ಮಸಣಕೆ ಸಾಗಿಹ ಮೊತ್ತವು
ಸಾವಿರ, ನಲವತ್ತೆರಡು

ಮಂದಿರ ನಿರ್ಮಿಸಿ ಮೂರ್ತಿಯ ಸ್ಥಾಪಿಸಿ
ಮಾಡದ ಮಾದನೆ ಗಣ್ಯ
ವಾರಸುದಾರನು ಶವಸಂಸ್ಕಾರಕೆ
ಗಳಿಸಿರೆ ಕೋಟಿಯ ಪುಣ್ಯ

ಸೇವೆಯ ಗುರುತಿಸಿ ಸಂಘ ಸಂಸ್ಥೆಗಳು
ನೀಡಿರೆ ಬಹುಪುರಸ್ಕಾರ
ತೃಪ್ತಿಯ ಹೊಂದಲು ಆಪ್ತಬಂಧುವು
ಮಾಡಲು ಶವಸಂಸ್ಕಾರ

ಪದಗಳ ನಮನವ ಸಲಿಸುವೆ ಬಾಗುತ
ತ್ರಿವಿಕ್ರಮ ಶ್ರೀ ಮಹದೇವ
ಸಾವಿರ ಹೆಣಗಳ ಸಾಗಿಸುತಿರಲು
ಸಾರ್ಥಕವಾಯಿತು ಜೀವ.

-ಸುಧಾಕಿರಣ್ ಅಧಿಕಶ್ರೇಣಿ