ಶುಕ್ರವಾರ, ನವೆಂಬರ್ 4, 2016

ಸೂರ್ಯ, ಕನ್ನಡಿಯ ಒಡೆದಾಗ



ಅದ್ಭುತವಾಗಿತ್ತು ಕಳೆದ ವರ್ಷ
ವರುಣನ ಮುನ್ನುಡಿ
ಹಾಗಾಗಿ, ಕೆರೆ ಕೊಳ್ಳ ತುಂಬಿ
ರಚನೆಯಾಗಿತ್ತು ನೀರಿನ ಕನ್ನಡಿ.

ಮುಖ ವೀಕ್ಷಣೆಗೆ ಭೂದೇವಿಯ ಕೊಡುಗೆ
ರವಿ ಚಂದ್ರ ತಾರೆಗೆ
ಅಲ್ಲಲ್ಲಿ ಬುಟ್ಟ, ನೀರ ನೆರಿಗೆಯ ಅಂಚು
ವನದೇವಿಯ ಹಸಿರ ಸೀರೆಗೆ.

ನೀರ ಕನ್ನಡಿಯಲ್ಲಿ ಮುಖನೋಡುತ್ತಿದ್ದ ಚಂದ್ರ
ತಾನೇ ಚಂದವೆಂದು ಕುಪ್ಪಳಿಸಿದ.
ಸಿಟ್ಟಾದ ಸೂರ್ಯ, ಕಿಚ್ಚಿನಲಿ ಉರಿದು
ಬಿಸಿಲಾಸ್ತ್ರದಲಿ ಅಪ್ಪಳಿಸಿದ.
ಹೊಡೆತಕ್ಕೆ ಕನ್ನಡಿ ಒಡೆಯಿತು
ಕಷ್ಟಗಳ ಹಡೆಯಿತು.
ಹೇಗೆ ಬಿದ್ದಿದೆ ನೋಡಿ
ಕಳಾಹೀನ ಕನ್ನಡಿಯ ಚೂರು
ಬದುಕ ದೇಹದ ಮೇಲೆ ಮಾಡಿದೆ ಗೀರು.


------ಸುಧಾಕಿರಣ ಅಧಿಕಶ್ರೇಣಿ.

ಸೋಮವಾರ, ನವೆಂಬರ್ 3, 2014

ಕನ್ನಡ ಕಲಿಸಿ ಕನ್ನಡ ಉಲಿಸಿ

ಕನ್ನಡ ಕಲಿಸಿ ಕನ್ನಡ ಉಲಿಸಿ
ಕನ್ನಡ ತನವನು ಭರಿಸಿ
ಕನ್ನಡ ಉಳಿಸಿ ಕನ್ನಡ ಬೆಳೆಸಿ
ಕನ್ನಡದಲೆ ವ್ಯವಹರಸಿ

ಕಟ್ಟಡದಲಿ ತೂಗಾಡುತಲಿರಲೀ
ಕನ್ನಡ ಬರೆಹದ ಫಲಕ
ಕನ್ನಡದಲೆ ಆಲೋಚನೆ ನಡೆದರೆ
ಭಾಷೆಗೆ ಭದ್ರದ ಚಿಲಕ

ನೆಲದುದ್ದಗಲಕು ಗುಡಿಗೋಪುರದಲಿ
ಅರಳಿವೆ ಕಲ್ಲಿನ ಸುಮವು
ಘಟ್ಟದ ವಿಸ್ಮಯ ವಿಶಿಷ್ಟ ಜೀವಿಗೆ
ವಿಶ್ವದಿ ಇಲ್ಲವು ಸಮವು

ಬೆಟ್ಟಬಯಲುಗಳು ಉಟ್ಟ ಬಟ್ಟೆಯದೋ
ಹಸುರಿರೆ ಕಣ್ಣಿಗೆ ಸಗ್ಗ
ಜಿಲ್ಲೆಜಿಲ್ಲೆಗಳ ಸೇರಿಸಿ ಹೊಲೆದಿದೆ
ಜೀವನದಿಗಳ ಹಗ್ಗ

ಕನ್ನಡ ಮಣ್ಣಿದು ತುಂಬಲು ಕಣ್ಣಲಿ
ಎದೆಯಲಿ ತೃಪ್ತಿಯ ತವರು
ಕನ್ನಡ ನೀರನು ಉದರವು ಸೇರಲು
ನಾಡಿಯು ಪಡೆವುದು ನವುರು

ಬೆಲ್ಲವೋ ಬತ್ತವೋ ರೈತನ ಚಿತ್ತವು
ಬದುಕಿನ ಬೆಳೆಗಳ ಬೆಳೆವ
ಪಲ್ಲೆ ಫಲಗಳ ಪುಷ್ಪ ಧಾನ್ಯಗಳ
ಬೆಳೆಯುತ ಹಸಿವದು ಕಳೆವ


ನಾಡಿನ ರಕ್ಷಣೆ ನೆಲದಭಿಮಾನಕೆ
ಎದುರಿಸಿ , ಹಿಡಿದಿರೆ ಕತ್ತಿ
ಮೆರೆದಿರೆ ಹುಲಿಗಳು ಮಡಿದಿರೆ ಕಲಿಗಳು
ಕನ್ನಡ ಮೇಲಕೆ ಎತ್ತಿ

ಬೀದಿಬದಿಗಳಲಿ ವಜ್ರ ರತ್ನಗಳು
ವಿಕ್ರಯಗೊಂಡಿರೆ ಹಿಂದೆ
ತಂತ್ರಜ್ಞಾನದಿ ನಾಡನು ಕಟ್ಟಿ
ವಿಶ್ವೇಶ್ವರರೇ ಮುಂದೆ

ಆಳಿದ ರಾಜರ ಜನಹಿತ ಕಾರ್ಯವು
ಇಂದಿಗು ಕೊಡುತಿದೆ ಫಸಲು
ಗಣಕಯಂತ್ರದ ತಂತ್ರ ಸಿದ್ಧಿಯಲಿ
ವಿಶ್ವಕೆ ತೋರಿದೆ ನೊಸಲು

ಮಾತೃ ಭಾಷೆಗೆ ಆದ್ಯತೆ ಕೊಟ್ಟಿರೆ
ಭಾಷೆಯ ಬೆಳೆವುದು ಸತ್ಯ
ಪೋಷಕ ಮಿತ್ರರೆ ಮಗಳ ಜತೆಯಲಿ
ಆಡಿರಿ ಕನ್ನಡ ನಿತ್ಯ

ಕನ್ನಡ ಕಲಿಯಲಿ ಬೆರೆಯುತ ನಲಿಯಲಿ
ನಾಡಿಗೆ ಬಂದಿಹ ಅನ್ಯ
ಹೊರಗಿನ ಜನಗಳೆ ಕನ್ನಡ ಮನಗಳ
ಕೆಡಿಸದೆ ಬಾಳಲು ಮಾನ್ಯ

ಕನ್ನಡ ಜನಗಳ ತುಂಬಿದ ಮನಗಳ
ಗೆಳೆತನ ಮಾಡಲು ಚೆಂದ
ನಾಡಿನ ಭಾಷೆಯ ಅಮೃತಶೀಷೆಯು
ಸವಿಯಲು ರುಚಿಕರ ಬಂಧ

ಕನ್ನಡ ದೇವಿಗೆ ನಮನವ ಸಲ್ಲಿಸಿ
ನಿಲ್ಲಿಪೆ ಕವನದ ಬಂಡಿ
ಕನ್ನಡ ರಕ್ಷಣೆ ಮಾಡಿರೆ ಮಂದಿಗೆ
ನಮಿಸಲು ಊರುವೆ ಮಂಡಿ 

ಸೋಮವಾರ, ಅಕ್ಟೋಬರ್ 13, 2014

ಬೆಳಕಿನ ಬೆಣ್ಣೆ



ಅಂಬರ ಚುಂಬಿಸಿ
ನೇಸರ ಬಂದ
ಬಣ್ಣದ ಮೊಸರನು ಕಡೆಯುತಲಿ

ಗಿಡಮರ ಕೊರಳಲಿ
ನಾದವ ತುಂಬಿ
ಬಣ್ಣನೆ ಗೀತೆಯ ಹಾಡುತಲಿ

ನಲಿಯುತ ಬಲಿಯುತ
ಬೆಳಕಿನ ಬೆಣ್ಣೆ
ಎದ್ದಿತು ನೀಲಿಯ ಗಡಿಗೆಯಲಿ

ಬೆಣ್ಣೆಯ ಸವಿಯನು 
ಸವಿಯುತ ಜೀವಿಯು
ತೊಡಗಲು ದಿನದಾ ನಡಿಗೆಯಲಿ

ಸಂಜೆಯ ಕತ್ತಲು
ಮುತ್ತಲು ಸುತ್ತಲು
ಕರಗಿತು ಬೆಣ್ಣೆಯು ಬೆಡಗಿನಲಿ

ಕತ್ತಲು ಸುರಿಯಿತು
ಕಪ್ಪನೆ ಹಾಲನು 
ರಾತ್ರಿಯ ಪಾತ್ರೆಯ ಹಡಗಿನಲಿ 

ಗುರುವಾರ, ಜೂನ್ 13, 2013

ನಾನು ಬೋನ್ ಸಾಯಿ ಕೇಳಿ ನನ್ನ ಬಾಯಿ


ಚಿತ್ರ ಕೃಪೆ - ಅಂತರ್ಜಾಲ

ಮೊಳೆದು ಬೆಳೆದು 
ಮುಗಿಲು ಮುಟ್ಟಿ ಗೆಲ್ಲುವಾಸೆ
ಬೆಳಕು ಬಿಸಿಲ 
ಹೀರಿ ಹೊರಗೆ ನಿಲ್ಲುವಾಸೆ
ತಣ್ಣ ಗಾಳಿ
ಬೀಸಿ ಬರಲು ಮೆಲ್ಲುವಾಸೆ
ಬಿಸಿಯ ಉರಿಯ
ತಡೆದು ನೆಳಲ ಚೆಲ್ಲುವಾಸೆ
                        
ಬರಡು ನೆಲಕೆ
ಹಸುರು ಬಣ್ಣ ತೊಡಿಸುವಾಸೆ
ಹಕ್ಕಿಗಳಿಗೆ 
ಹಣ್ಣಿನೂಟ ಬಡಿಸುವಾಸೆ
ಕೊಂಬೆ ಕೊಂಬೆ 
ಹಕ್ಕಿ ಗೂಡ ಹೊರುವ ಆಸೆ
ಹಕ್ಕಿ ಗುಂಪ 
ಕರೆದು ಹಾಡ ಕೇಳುವಾಸೆ
ಹೂವ ತಳೆದು 
ಚೆಲುವ ಮೈಯ್ಯ ತೋರುವಾಸೆ
ಬೇರನಿಳಿಸಿ 
ನೆಲದ ಜಲವ ಹೀರುವಾಸೆ
ಚೈತ್ರ ಬರಲು 
ಕವಿಯ ಕರೆದು ಬರೆಸುವಾಸೆ 
ಬಿಳಲ ಬಿಟ್ಟು
ಚಿಣ್ಣರಿಟ್ಟು ತೂಗುವಾಸೆ
ಬೇರುಬಿಟ್ಟು
ಭದ್ರವಾಗಿ ಬಾಗುವಾಸೆ
ನನ್ನ ಜನ್ಮ 
ಸಫಲತೆಯಲಿ ಮಾಗುವಾಸೆ
ಮಳೆಯು ಸುರಿಯೆ 
ಹಸಿರು ಕೊಡೆಯ ಹಿಡಿಯುವಾಸೆ
ಚಿಗುರು ತುಟಿಯ
ತೆರೆದು ಜಗಕೆ ನುಡಿಯುವಾಸೆ
ಬೀಜ ತೂರಿ
ನನ್ನ ವಂಶ ಬೆಳೆಸುವಾಸೆ
ಎಲೆಯ ಕೆಡವಿ 
ಪೋಷಕಾಂಶ ಉಳಿಸುವಾಸೆ



ಏಕೆ ಮನುಜ
ನನ್ನ ಮೇಲೆ ನಿನಗೆ ಆಸೆ?
ನನ್ನ ಕಟ್ಟಿ 
ಮಾರಿಕೊಳಲು ಬಹುದು ಕಾಸೆ
ತಾಯಿ ಬೇರ 
ಕಡಿದುಬಿಟ್ಟೆ , ಹೀಗೆ ಬೆಳೆಸಿ
ಚಿಗುರ ಚಿವುಟಿ
ಹೀಗೆ ನೆಟ್ಟೆ ಕನಸ ಅಳಿಸಿ
ಮನೆಯ ಒಳಗೆ 
ತಂದು ಇಡುವೆ ಬಹಳ ಅಂದ
ಆಸೆ ಸುಟ್ಟು
ನೂಕಿ ಬಿಟ್ಟೆ ನನಗೆ ಬಂಧ
ಬದುಕಲಾರೆ 
ಸಾಯಲಾರೆ ಬೇಗ ಕೊಲ್ಲು
ತದುಕಲಾರೆ 
ಬೈಯ್ಯಲಾರೆ ಬರದು ಸೊಲ್ಲು
ಓದಿ ಬೆಳೆದು 
ಮನೆಯಲಿರುವ ಹೆಣ್ಣಿನಂತೆ
ಆಸೆ ತೂರಿ
ಅಳುವ ಮಾರಿ, ಅಬಲೆಯಂತೆ

ಇಲ್ಲ ಬಾಯಿ 
ಕೂಗಿಕೊಳಲು ನನ್ನ ಗತಿಯು
ಬೋನ್ ಸಾಯಿ
ಎಂಬ ಹೆಸರ ನನ್ನ ತಿಥಿಯು.

ಮಂಗಳವಾರ, ಅಕ್ಟೋಬರ್ 9, 2012

ಇಂದು ಅಂಚೆಯ ದಿನ , ಅಂಚೆಯಣ್ಣನ ನೆನೆಯಿತು ನನ್ನ ಮನ

ಕೈ ಚೀಲ ಸೈಕಲ್ಲು ಮನೆ ಮುಂದಕೆ ಬೆಲ್ಲು
ಹೊಡೆದು ಕರೆವಾ ಗೆಳೆಯ ಅಂಚೆಯಣ್ಣ
ಹೊತ್ತು ಭಾವದ ಕೋಶ ಹೊರಗೆ ಖಾಕಿಯ ವೇಷ
ತೆಗೆದು ಕೈಗಿಡುವನು ಭಾವ ಬಣ್ಣ.

ಹಿಂದೆ ನಾ ಚಿಕ್ಕವನು , ಅಂಚೆಯವ ಸಿಕ್ಕವನು
ಕೊಡುತ್ತಿದ್ದ ಕೈಗೆ ಕೌತುಕದ ಪತ್ರ
ಸುಖ ದುಃಖ ಸಾಲುಗಳ ಜೀವನದ ಸೋಲುಗಳ
ಹೊರೆಹೊತ್ತು ಬರುತ್ತಿತ್ತು, ಬರೆದಿರಲು ಮಿತ್ರ.

ಅಂಚೆಯಣ್ಣನ ದಾರಿ ಕಾದು ಸಹನೆಯು ಮೀರಿ
ಬರದಿರಲು ಕೋಪವದು ಏರುತ್ತಿತ್ತು
ತಡವಾದರೂ ಬಿಡದೆ ಮನೆಬುಡಕೆ ಬಂದಾಗ
ಮನಮೆಚ್ಚಿ ಮೊಗದಿ ನಗೆ ಬೀರುತ್ತಿತ್ತು.

ಪ್ರೀತಿ ಗೌರವ ಹೆಚ್ಚಿ ಅಂಚೆಯಣ್ಣನ ಮೆಚ್ಚಿ
ಒಳಮನೆಯ ಸತ್ಕಾರ, ಓಲೆ ಸಿಹಿಗೆ.
ಅಂಚೆಯಣ್ಣನ ಜಪಿಸಿ , ಬರಲು ಮನದಲಿ ಶಪಿಸಿ
ಕೈಗಿಟ್ಟ  ಸಂದೇಶದಂಶ ಕಹಿಗೆ.

ಓಲೆ ಸರಕಿನ ಮರ್ಮ ತಿಳಿಯದಿರುವುದೇ ಧರ್ಮ
ಹೊರೆಹೊತ್ತು ನಡೆಯುವನು ಅಂಚೆಯಣ್ಣ
ನೆಂಟರೂರಿನ ಸುದ್ದಿ ಬರೆದ ನುಡಿಗಳ ತಿದ್ದಿ
ಕಳುಹುತಿಹ  ರಾಯಸದಿ ರಸದ ಗಿಣ್ಣ.

ಬಿಸಿಲಿರಲಿ ಮಳೆಯಿರಲಿ ನಡುಗುವಾ ಚಳಿಯಿರಲಿ
ಅಂಚೆ ತಲುಪಿಸುವಲ್ಲಿ ಕಾರ್ಯಕ್ಷಮತೆ
ಹಳ್ಳಕೊಳ್ಳದ ದಾರಿ ಬೆಟ್ಟ ತುದಿಗಳ ಏರಿ
ಹಳ್ಳಿಗಾಡಿನ ಜನಕೆ ತೋರಿ ಮಮತೆ.

ದೂರದೂರಿನ ಮಗನ ಓಲೆಯೋದಲು ಬರದ
ಜನಗಳಿಗೆ ಕ್ಷೇಮವನು ಓದಿ ಹೇಳಿ
ಮಾಸ ಮಾಸಕೆ ಬರುವ ಸರಕಾರಿ ಪಿಂಚಣಿಯ
ಸಲುವ ವ್ಯಕ್ತಿಗೆ ಕೊಡುವ ಸಹನೆ ತಾಳಿ.

ಮೆಸೇಜು ಈ ಮೈಲುಗಳು ಕ್ಷಣದಿ ಸಾವಿರ ಮೈಲು
ಚಲಿಸಿ, ಪತ್ರದ ಸ್ಥಾನ ಕಸಿದು ಮೆರೆದು.
ಮಂದಗತಿಯಲೆ ಬರಲು ಹೃದಯ ಜೊತೆಯಲೆ ತರಲು
ಪತ್ರ ಒಳಸೇರುವುದು ಮನವ ತೆರೆದು.

ಮಾಡಿ ಪತ್ರದ ರೂಡಿ, ಪೆಟ್ಟಿಗೆಯ ಒಳ ದೂಡಿ
ಸ್ವೀಕರಿಸಿ, ಅನುಭವಿಸಿ ಅಂಚೆ ಸುಧೆಯ.
ಪತ್ರ, ಬಳಗದಿ ಗಂಟ ಬೆಸೆಯುತಲಿ ಸವಿನಂಟ
ಕ್ಷಣದೊಳಗೆ ಎದೆಯಲ್ಲಿ ಭಾವದುದಯ.

ಅಂಚೆಯಾ ದಿನದಂದು ಅಂಚೆಯಣ್ಣಗೆ ಒಂದು
ನಮನವನು ಮಾಡೋಣ ಪ್ರೀತಿ ತೋರಿ
ದಿನದ ವಿದ್ಯುನ್ಮಾನ ಮಾಧ್ಯಮದ  ಹೊರಗೊಮ್ಮೆ
ಅಂಚೆಯಲಿ ವ್ಯವಹರಿಸಿ ಎಲ್ಲಸೇರಿ .   
      

ಸೋಮವಾರ, ಅಕ್ಟೋಬರ್ 1, 2012

ತಾತನ ಪಥ

ಖಾಲಿ ಖಾತೆ
ಕೈಯಲ್ಲಿ ಗೀತೆ
ತೇವದ ಕರುಳು
ಓದಲು ಹರಳು
ಸವೆಸಿರೆ ಮೆಟ್ಟು 
ಬಿಗಿ ಇಹ ಪಟ್ಟು
ಉಡಲೆರಡು ವಸ್ತ್ರ
ಸತ್ಯಾಗ್ರಹದ ಅಸ್ತ್ರ

ನೂಲಿಗೆ ಚರಕ
ನಾಲಿಗೆ ಎರಕ
ಭಜನೆಯ ಸಾಲು
ಊರಲು ಕೋಲು
ಊಟದಿ ಪಥ್ಯ
ನೋಟದಿ ಸತ್ಯ

ಜೀವನ ಸರಳ 
ವಿಶ್ವದಿ ವಿರಳ
ನುಣ್ಣನ ತಲೆಯು 
ತಣ್ಣನ ನೆಲೆಯು
ಸಮಾನ ಮನಸು
ಬಿಡುಗಡೆಯ ಕನಸು

ವಾಂಛೆಯ ನಿಗ್ರಹ
ಶಾಂತತೆ ವಿಗ್ರಹ
ದಂಡಿಗೆ ದಂಡು
ಉಪ್ಪನು ಉಂಡು
ಕಟ್ಟದೆಲೆ ವೇಷ
ಕಟ್ಟಿದರು ದೇಶ

ಅಹಿಂಸೆಯ ಡೊಳ್ಳು
ಆಂಗ್ಲಗೆ ಮುಳ್ಳು
ದಾಸ್ಯದ ಕೊನೆ
ಲಾಸ್ಯದ ಕೆನೆ
ಗೆದ್ದಿತು ಖಾದಿ
ಬಿದ್ದಿತು ಗಾದಿ

ಬಿಳಿಯರ ಮದ್ದು
ನಿಲಿಸಿತು ಸದ್ದು
ಗೋಡ್ಸೆಯ ಗುಂಡು
ನಾಡಿಯ ತುಂಡು
ಅಮರರು ಬಾಪು
ಒತ್ತಿರೆ ಛಾಪು

ಮಹಾತ್ಮ ಗಾಂಧಿ
ಶಾಂತಿಗೆ ನಾಂದಿ.


ಬುಧವಾರ, ಆಗಸ್ಟ್ 8, 2012

ದ್ವಾಪರದ ಶ್ರೀಕೃಷ್ಣ ದೇವನೆನಿಸಿಲ್ಲ

ವಿಶ್ವಾಸ ಬೆಳೆಸಿರಲು ತಂತ್ರಗಳ ಬಳಸಿರಲು
ದ್ವಾಪರದ ಶ್ರೀಕೃಷ್ಣ ದೇವನೆನಿಸಿಲ್ಲ
ವ್ಯಾಪಿಸಿರೆ ಕಣಕಣದಿ ಸರ್ವಮಾನ್ಯದ ಗುಣದಿ
ಮನುಜ ಶಕ್ತಿಯೆ ಎನಲು ಅವಗೆ ಮುನಿಸಿಲ್ಲ.

ವಿಷದ ಮೊಲೆಯನು ಉಂಡು ಸಾಯಲೆಳೆಸದ ಗಂಡು
ಪೂತನಿಯ ಕೊಂದಿರಲು ಗುದ್ದಿಗುದ್ದಿ
ವಿಕ್ರಮವು ಪೋರನ ನವನೀತ ಚೋರನ
ಪುರವೆಲ್ಲ ತುಂಬಿರಲು ಹೆಮ್ಮೆ ಸುದ್ದಿ.

ಅಂಬೆಗಾಲಲಿ ಹರಿದು ಬೆಣ್ಣೆ ಗಡಿಗೆಯ ಸುರಿದು
ಹಾಲು ಮೊಸರಲೆ ಬೆಳೆದ ಮುದ್ದು ತುಂಟ
ಕೊಂಬೆ ರೆಂಬೆಯ ತರಿದು , ಮಣ್ಣ ಬಾಯಿಯ ತೆರೆದು
ಅಮ್ಮನನು ಬೆಚ್ಚಿಸಲು ತುಂಬಿ ಕಂಠ.

ವಿಷಕಾರಿ ಹಾವಿನ ಉಪಟಳವ ತಪ್ಪಿಸಲು
ಹೆಡೆತುಳಿದು ಹೆದರಿಸುತ ಓಡಿಸಿರಲು
ಭಯದ ಸೆರಗಿನಲಿದ್ದ ಪುರಜನರ ಬಿಡಿಸಿದ್ದ
ಹಾವುನೋವಿನ ರಗಳೆ ಝಾಡಿಸಿರಲು.

ಗೋಪಿಕೆಯ ಜಡೆ ಎಳೆದು ಮೈಗೆ ಬೆಣ್ಣೆಯ ಬಳಿದು
ಗೋಳಿನಾಟವ ಆಡಿ ಮೆರೆದ ಪುಂಡ
ಜಳಕದಲಿ ಗೋಪಿಯರ ಕಂಡು ಪುಳಕಿತನಾಗಿ
ವಸ್ತ್ರಗಳ ಅಪಹರಿಸಿ ಕರೆದ ಭಂಡ.

ಏದು ರಕ್ಕಸ ತಂಡ ಕಾದು ದನಗಳ ಹಿಂಡ
ಹೈನುಗಾರಿಕೆಯರ್ಥ ತಿಳಿದ ಪೋರ
ಪ್ರೀತಿ ಮಳೆಯನು ಸುರಿಸಿ ಹಾಲು ಹೊಳೆಯನು ಹರಿಸಿ
ಗೋಕುಲವ ತಣಿಸಿರುವ ತಂತ್ರಗಾರ.

ವ್ಯವಹಾರ ಚತುರನಿವ ವ್ಯಾಪಾರ ಹೆಚ್ಚಿಸಿರೆ
ಗೋಕುಲದ ತುಂಬೆಲ್ಲ ಅರ್ಥ ಸಂಮೃದ್ಧಿ
ಪರ್ವತದ ಕೊಡೆ ಹಿಡಿದು ಇಂದ್ರನನು ನಾಚಿಸಿರೆ
ಪ್ರಕೃತಿಪೂಜೆಗೆ ನೀಡಿ ಚಲನೆ ಸುದ್ದಿ.

ಬೆಣ್ಣೆ ಕರಗಲು ಕೈಗೆ ಕೊಳಲು ಬಂದಿರೆ ಮೈಗೆ
ಹುಡುಗಾಟ ಹೊರಹೋಗಿ ಹರಯ ಬಂದು
ಅತೃಪ್ತ ರಾಧೆಯನು ನುಡಿಸಿ ಸವಿ ಸೋದೆಯನು
ಶೃಂಗಾರ ಯಮುನೆಯಲಿ ದಿನವು ಮಿಂದು.

ಕೊಳಲು ಕೈಯೊಳಗಿರಲು ಬಿಡದು ಪ್ರೇಮದ ನೆಳಲು
ಅರಿತು ಕೊಳಲನು ಇಡಲು ರಾಧೆಯಳಲು
ತ್ಯಾಗದಲಿ ಸಾಧನೆಯು ನೆನಪಿರಲು ವೇದನೆಯು
ಬಿಟ್ಟು ಹೊರಡಲು ಸ್ಮರಣೆ ಹೆಜ್ಜೆ ಮಳಲು.

ಮಾವ ಕಂಸನ ಕೊಲದೆ ಮಥುರ ನಗರಿಯ ಗೆಲದೆ
ಬದುಕು ದುಸ್ತರವಾಗಿ ಕಂಸವಧೆಯು
ಬಿಡಿಸಿ ಒದಗಿದ ವ್ಯಾಜ್ಯ , ಕೊಡಿಸಿ ಅಜ್ಜಗೆ ರಾಜ್ಯ
ಕಲಿಕೆ ಸಾಂದೀಪಿನಿಯ ಜ್ಞಾನಸುಧೆಯು.

ರಾಜ್ಯವನು ಗೆಲಿಸುವುದು ರಾಜನನು ನಲಿಸುವುದು
ರಾಜನಾಗುವ ಆಸೆ ತೋರಲಿಲ್ಲ
ತಂತ್ರಗಳ ಹೂಡುತಲಿ ರಾಜನನು ಮಾಡುತಲಿ
ಎಲ್ಲು ಒಂದೆಡೆ ಇನಿತು ಕೂರಲಿಲ್ಲ.

ಪ್ರೌಢಿಮೆಯ ಹಲಹಂತ ಸಾಗುತಿರೆ ಧೀಮಂತ
ಬೆಣ್ಣೆ ಕೊಳಲದು ಕಳಚಿ ಚಕ್ರ ಬಂತು
ದುಷ್ಟ ಶಿಕ್ಷಣಕೆಂದು ಶಿಷ್ಟ ರಕ್ಷಣವೆಂದು
ಉಗ್ರತಂತ್ರದ ಕಾರ್ಯ ಮಾಡಿ ನಿಂತು.

ದೇವಕಿಯ ಸಂಜಾತ ,ರುಕ್ಮಿಣಿಯ ಸಂಪ್ರೀತ  
ಸತ್ಯಭಾಮೆಯ ನಿತ್ಯ ಮುದಗೊಳಿಸಿದವನು
ಮಹಿಳೆಯರ ಒಳಮನದ ಸೂಕ್ಷ್ಮತೆಗೆ ಸ್ಪಂದಿಸುತ
ಸಮತೆ ಭಾವವ ತೋರಿ ಹದಗೊಳಿಸಿದವನು.

ದ್ವಾರಕೆಯ ನಿರ್ಮಾಣ ವ್ಯವಹಾರ ಉಗ್ರಾಣ
ಅರ್ಥಕಲ್ಪನೆಗೊಂದು ನೀಡಿ ರೂಪ
ಕಡಲತೀರದ ನಗರಿ ವಹಿವಾಟುಗಳು ಚಿಗುರಿ
ಬಂದರಿನ ಬಾಂಧವ್ಯ ತಂದ ಭೂಪ.

ಬಡತನವ ಪ್ರತಿನಿಧಿಪ ಸುಧಾಮನಲಿ ಹುರುಪ
ತುಂಬಿ,ಮನೆಯಲಿ ಉಂಡು ಹಿಡಿಯ ಅವಲಕ್ಕಿ
ಸಂಕಷ್ಟದಲಿ ಅಂದು ದ್ರೌಪದಿಯು ಸಿಲುಕಿರಲು
ಅನ್ನ ಅಕ್ಷಯಗೊಳಿಸೆ  ಹರುಷ ಉಕ್ಕಿ,

ಯುದ್ಧರಂಗದಿ ನಿಂದು ಬಂಧುವೆನ್ನದೆ ಕೊಂದು
ಗೆಲುವ ಗುರಿಯಾಗಿಸಲು ನೀಡಿ ಸ್ಫೂರ್ತಿ
ಯುದ್ಧದುದ್ದೇಶವೇ ಗೆಲವು ಮಾತ್ರವೆ ಎಂದ
ಗುರುವಾಗಿ ಕ್ಷಣಕ್ಷಣದಿ ನಿಂತ ಮೂರ್ತಿ.

ಸಮರ ಸನ್ನದ್ಧನಿಗೆ ಅಳುವೇಕೆ ಅಳುಕೇಕೆ
ಯುದ್ಧ ನೀತಿಯ ಬಿಡದೆ ತುಡುಗು ಎಂದ
ಭ್ರಮರ ಮತಿಯದು ಬೇಡ ನಿಶ್ಚಯಿಸಿ ಗುರಿಮಾಡ
ದುಷ್ಟ ಸಂಹಾರವೇ ಮುಖ್ಯವೆಂದ.