ಗುರುವಾರ, ಜೂನ್ 13, 2013

ನಾನು ಬೋನ್ ಸಾಯಿ ಕೇಳಿ ನನ್ನ ಬಾಯಿ


ಚಿತ್ರ ಕೃಪೆ - ಅಂತರ್ಜಾಲ

ಮೊಳೆದು ಬೆಳೆದು 
ಮುಗಿಲು ಮುಟ್ಟಿ ಗೆಲ್ಲುವಾಸೆ
ಬೆಳಕು ಬಿಸಿಲ 
ಹೀರಿ ಹೊರಗೆ ನಿಲ್ಲುವಾಸೆ
ತಣ್ಣ ಗಾಳಿ
ಬೀಸಿ ಬರಲು ಮೆಲ್ಲುವಾಸೆ
ಬಿಸಿಯ ಉರಿಯ
ತಡೆದು ನೆಳಲ ಚೆಲ್ಲುವಾಸೆ
                        
ಬರಡು ನೆಲಕೆ
ಹಸುರು ಬಣ್ಣ ತೊಡಿಸುವಾಸೆ
ಹಕ್ಕಿಗಳಿಗೆ 
ಹಣ್ಣಿನೂಟ ಬಡಿಸುವಾಸೆ
ಕೊಂಬೆ ಕೊಂಬೆ 
ಹಕ್ಕಿ ಗೂಡ ಹೊರುವ ಆಸೆ
ಹಕ್ಕಿ ಗುಂಪ 
ಕರೆದು ಹಾಡ ಕೇಳುವಾಸೆ
ಹೂವ ತಳೆದು 
ಚೆಲುವ ಮೈಯ್ಯ ತೋರುವಾಸೆ
ಬೇರನಿಳಿಸಿ 
ನೆಲದ ಜಲವ ಹೀರುವಾಸೆ
ಚೈತ್ರ ಬರಲು 
ಕವಿಯ ಕರೆದು ಬರೆಸುವಾಸೆ 
ಬಿಳಲ ಬಿಟ್ಟು
ಚಿಣ್ಣರಿಟ್ಟು ತೂಗುವಾಸೆ
ಬೇರುಬಿಟ್ಟು
ಭದ್ರವಾಗಿ ಬಾಗುವಾಸೆ
ನನ್ನ ಜನ್ಮ 
ಸಫಲತೆಯಲಿ ಮಾಗುವಾಸೆ
ಮಳೆಯು ಸುರಿಯೆ 
ಹಸಿರು ಕೊಡೆಯ ಹಿಡಿಯುವಾಸೆ
ಚಿಗುರು ತುಟಿಯ
ತೆರೆದು ಜಗಕೆ ನುಡಿಯುವಾಸೆ
ಬೀಜ ತೂರಿ
ನನ್ನ ವಂಶ ಬೆಳೆಸುವಾಸೆ
ಎಲೆಯ ಕೆಡವಿ 
ಪೋಷಕಾಂಶ ಉಳಿಸುವಾಸೆ



ಏಕೆ ಮನುಜ
ನನ್ನ ಮೇಲೆ ನಿನಗೆ ಆಸೆ?
ನನ್ನ ಕಟ್ಟಿ 
ಮಾರಿಕೊಳಲು ಬಹುದು ಕಾಸೆ
ತಾಯಿ ಬೇರ 
ಕಡಿದುಬಿಟ್ಟೆ , ಹೀಗೆ ಬೆಳೆಸಿ
ಚಿಗುರ ಚಿವುಟಿ
ಹೀಗೆ ನೆಟ್ಟೆ ಕನಸ ಅಳಿಸಿ
ಮನೆಯ ಒಳಗೆ 
ತಂದು ಇಡುವೆ ಬಹಳ ಅಂದ
ಆಸೆ ಸುಟ್ಟು
ನೂಕಿ ಬಿಟ್ಟೆ ನನಗೆ ಬಂಧ
ಬದುಕಲಾರೆ 
ಸಾಯಲಾರೆ ಬೇಗ ಕೊಲ್ಲು
ತದುಕಲಾರೆ 
ಬೈಯ್ಯಲಾರೆ ಬರದು ಸೊಲ್ಲು
ಓದಿ ಬೆಳೆದು 
ಮನೆಯಲಿರುವ ಹೆಣ್ಣಿನಂತೆ
ಆಸೆ ತೂರಿ
ಅಳುವ ಮಾರಿ, ಅಬಲೆಯಂತೆ

ಇಲ್ಲ ಬಾಯಿ 
ಕೂಗಿಕೊಳಲು ನನ್ನ ಗತಿಯು
ಬೋನ್ ಸಾಯಿ
ಎಂಬ ಹೆಸರ ನನ್ನ ತಿಥಿಯು.

4 ಕಾಮೆಂಟ್‌ಗಳು:

 1. ಸುಧಾಕಿರಣ್ ಸರ್ ಬಹಳ ದಿನಗಳ ನಂತರ ನಿಮ್ಮ ಬ್ಲಾಗಿಗೆ... ಬೋನ್ಸಯ್ ಮಹಿಮೆ ಬಹಳ ಸುಂದರ

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಹಲವಾರು ಗೀತೆ ಗಳನ್ನು ಬರೆದಿದ್ದೇನೆ.ಆದರೆ ಅವುಗಳನ್ನು ಬ್ಲಾಗಿಗೆ ಅಂಟಿಸುವಲ್ಲಿ ಸ್ವಲ್ಪ ಸೋಮಾರಿ.ಇಂದು ನನ್ನಾಕೆಯೆ ಆಕೆಲಸ ಮಾಡಿದ್ದಾಳೆ.
   ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.

   ಅಳಿಸಿ
 2. ಬೋನ್‍ಸಾಯಿಯ ವ್ಯಥೆಯ ಬಗೆಗೆ ಉತ್ತಮ ಕವನ ಬರೆದಿದ್ದೀರಿ. ನನ್ನದೂ ನಿಮ್ಮ ಅಭಿಪ್ರಾಯವೇ ಆಗಿದೆ.

  ಪ್ರತ್ಯುತ್ತರಅಳಿಸಿ
 3. ಬೋನ್ಸಾಯ್ ಗಿಡಗಳನ್ನು ಕಂಡಾಗ ಕಾಣುವುದು
  ನನಗೆ ಕಲೆಯೊಂದಿಗೆ ಕುಂಠಿತಗೊಂಡ ಹಸಿರ ಬೆಳವಣಿಗೆ
  ಚಂದಗೆ ವಿಸ್ತರಿಸಿದ್ದೀರಿ

  ಪ್ರತ್ಯುತ್ತರಅಳಿಸಿ