ಬುಧವಾರ, ಜನವರಿ 27, 2010

ಮುಹೂರ್ತದ ರಗಳೆ

ಆತ ನನ್ನನ್ನು ಮೆಚ್ಚಿದ್ದಾನೆ
ನಾನು ಆತನನ್ನು ಮೆಚ್ಚಿದ್ದೇನೆ
ಮೆಚ್ಚಿದ್ದನ್ನು ಬಿಚ್ಚಿಡಲು
ಭಯ ಮುಜುಗರದಿಂದ ಬಚ್ಚಿಟ್ಟಿದ್ದೇವೆ.

ದಿನವೂನನ್ನ ಕೊರಗು-ಸೊರಗು ಕಂಡು
ಬೆಂಕಿ, ಹೊಳೆ,ವಿಷ, ಹಗ್ಗಕ್ಕೆ ಹೆದರಿ
ಅಪ್ಪ ಒಪ್ಪುತ್ತಾನೆ.
ಅಪ್ಪ ಒಪ್ಪಿದ ತಪ್ಪಿಗೆ , ತೃಪ್ತಿಗೆ
ಶಾಸ್ತ್ರ ಮುಹೂರ್ತಕ್ಕೆ ಕಟ್ಟುಬೀಳಬೇಕು.
ಬೀಳುತ್ತೇನೆ.
ಮುಹೂರ್ತ ಗೊತ್ತುಪಡಿಸಿದ್ದಾರೆ
ಆದರೆ ಆ ಹೊತ್ತಿಗೆ
ಅತ್ತಿಗೆಗೆ ಒಂಬತ್ತು ತುಂಬುತ್ತದೆ!

ಸ್ವಲ್ಪ ದಿನಗಳ ನಂತರ ನೋಡಿದರೆ
ನನಗೆ ತಿಂಗಳ ಕಡ್ಡಾಯ ರಜೆ!
ಹೋಗಲಿ ಇವೆರಡನ್ನೂ ತಪ್ಪಿಸಿ ಇಟ್ಟಿದ್ದಾಗಿದೆ,
ಇನ್ನು ತೊಂದರೆಯಿಲ್ಲ.

ಸ್ವಲ್ಪ ತಡೀರಿ......
ಒಂದು ಸುದ್ದಿ-
ಮುಲೆ ಮನೆ ಮಹದೇವನನ್ನು
ಹಾಸಿಗೆ ಸಹಿತ ಹೊರಗೆ ತಂದಿದ್ದಾರಂತೆ.
ಛೇ- ನಾನು ಮಾಲೆ ಹಾಕೋದು
ಮುಲೇಮನೆ ಮಹದೇವನಿಗಲ್ಲ
ಆದರೆ ಶಾಸ್ತ್ರ ಕೇಳಬೇಕಲ್ಲ, ಇರಲಿ.

ರಜೆ, ಸೂತಕ, ವೃದ್ಧಿ-ಎಲ್ಲಾ ಕಳೀತು
ಇನ್ನು ನಿಶ್ಚಿಂತೆ ... ಮುಹೂರ್ತ
...........ಹುಡುಕಬಹುದು,

ಅಯ್ಯೋ , ಎಂಥಾ ಅವಸ್ಥೇ
ಅವರಿಂದ ಪತ್ರ ಬಂದಿದೆ
ಇಟ್ಟಿರೋ ದಿನದ ಎಡಬಲಕ್ಕೆ
ತಾಯಿ ಒಳಗೆ ಬರೋದಿಲ್ವಂತೆ

ಒಳ್ಳೇ ಗ್ರಹಚಾರ,
ಹಲ್ಲು ಇದ್ದರೆ ಕಡಲೆಯಿಲ್ಲ
ಕಡಲೆಯಿದ್ದರೆ ಹಲ್ಲಿಲ್ಲ
ದಿನ ಇಟ್ಟರೆ ಹುಟ್ಟು-ಸಾವು-ಮುಟ್ಟು
ಬಿಟ್ಟರೆ ದಿನ ಬೇಕಲ್ಲ

ಅಂತೂ ಒಂದು ಮುಹೂರ್ತ ಅಡ್ಡಿಯಿಲ್ಲವಂತೆ
ಬರುವ ಶುಕ್ರವಾರವಂತೆ
ಒಂದು ಕೆಲಸ , ಅವತ್ತು ಬೇಡ
ಆ ಶುಕ್ರವಾರದ ೧೧ ದಿನಕ್ಕೆ ಸರಿಯಾಗಿ ಇಟ್ಟರೆ
ನನ್ನ ಮಗೂಗೆ ನಾಮಕರಣವನ್ನೂ ಮಾಡಬಹುದು
ಏಕೆಂದರೆ , ನಾಳಿನ ಶುಕ್ರವಾರಕ್ಕೆ ನನಗೆ
ಒಂಭತ್ತು ಪೂರ್ಣ ತುಂಬುತ್ತೆ.

5 ಕಾಮೆಂಟ್‌ಗಳು:

  1. ಹ್ಹ..ಹ್ಹ...ಹಾ...ಗಣಪತಿ ಮದುವೆಗೆ ನೂರೆಂಟು ವಿಘ್ನ ಅಂತಾರಲ್ಲಾ ...ಹಾಗಾಯ್ತು ಇದು.....ಮಜವಾಗಿದೆ...ಚೆನ್ನಾಗಿದೆ. ಕೊನೆ ಪಂಚ್ ಇನ್ನೂ ಚೆನ್ನಾಗಿದೆ.. Thank u sir

    ಪ್ರತ್ಯುತ್ತರಅಳಿಸಿ
  2. ಹಹಹ ಸೂಪರ್ರು ಸರ್ ನಿಮ್ಮನ್ನ ಬೆಂಗಳೂರಿನ ಯಕ್ಷಗಾನ ಕಾರ್ಯಕ್ರಮಗಳಲ್ಲಿ ನೋಡಿದ್ದೆ.
    ನಿಮ್ಮ ಕಾವ್ಯಾತ್ಮಕ ನಿರೂಪಣೆಗಳನ್ನ ಮೆಚ್ಚಿದ್ದೆ.ಕಣ್ಣಿಮನೆಯವರ ಮೇಲಿಟ್ಟಿರುವ ಅಭಿಮಾನಕ್ಕೆ ಬೆರಗಾಗಿದ್ದೆ.ಇವತ್ತು ನಿಮ್ಮ ಅಘಾದವಾದ ಕಾವ್ಯಸಂಪತ್ತನ್ನ ನೋಡಿ,ಓದಿ,ಅನುಭಾವಿಸಿ ಬೆರಗಾದೆ.ಇಂತಹಾ ಹಲವಾರು ಬರಹಗಳನ್ನ ನಿರೀಕ್ಷಿಸುತ್ತನೆ.

    ಪ್ರತ್ಯುತ್ತರಅಳಿಸಿ
  3. ಕವನವನ್ನು ಇಷ್ಟಪಟ್ಟ ಮಿತ್ರರೆಲ್ಲರಿಗೂ ಧನ್ಯವಾದಗಳು.ನಿಮ್ಮ ಅಭಿಲಾಷೆಯಂತೆ ಪ್ರತೀ ವಾರವೂ ವಿಭಿನ್ನ ಶೈಲಿಯ ಒಂದೊಂದು ಕವನವನ್ನು ಈ ಬ್ಲಾಗ್ ನಲ್ಲಿ ಪ್ರಕಟಿಸುತ್ತೇನೆ.

    ಪ್ರತ್ಯುತ್ತರಅಳಿಸಿ