ಗುರುವಾರ, ಮಾರ್ಚ್ 25, 2010

ಕಾವ್ಯ ಕಂಬನಿ


ಇದು ಇಪ್ಪತ್ತು ದಿನಗಳ ಹಿಂದೆ ನಮ್ಮನ್ನೆಲ್ಲ ಅಗಲಿದ ಮಹಾನ್ ಚೇತನ ನನ್ನ ತಂದೆ ಸೂರ್ಯನಾರಾಯಣ ಭಟ್ಟರಿಗೆ ಸಲ್ಲಿಸಿದ ಕಾವ್ಯ ಕಂಬನಿ.

ಬದುಕ ಪಯಣವ ಮುಗಿಸಿ ಕಣ್ಣಿಂದ ಮರೆಯಾದ
ಭಾವಗಳ ಹೊಮ್ಮಿಸುತ ಜ್ಞಾನಸೂರ್ಯ.
ದಿನವು ಬೆಳಕನು ಚೆಲ್ಲಿ ಜನಮನದಿ ದೊರೆಯಾದ
ಹೊಣೆಹೊತ್ತು ನಡೆಸಿರಲು ಹಲವು ಕಾರ್ಯ.

ಅಕ್ಷರ ಬರೆದು ಶಿಕ್ಷಣದ ತೊರೆಯಾಗಿ
ಹರಿದಿರಲು ಹಲವು ಕಡೆ ಶಾಲೆ ಕಟ್ಟಿ.
ತನದೆ ಶಿಸ್ತಿನ ನಡೆಗೆ ಬದ್ಧತೆಗೆ ಸೆರೆಯಾಗಿ
ಶಿಷ್ಯರೆದೆಯಲಿ ಸ್ಥಾನ ಪಡೆದು ಗಟ್ಟಿ.

ಕಲೆಗೆ ಅದ್ಯತೆ ನೀಡಿ ಪ್ರತಿಭೆಗಳ ಮೆರೆಸಿರಲು
ಸಾಂಸ್ಕೃತಿಕ ಜೀವನಕೆ ತಾಯಿಬೇರು.
ಚೇತನದ ಹನಿಹನಿಸಿ ಸಾಹಿತ್ಯ ಬರೆಸಿರಲು
ನಾಡೆಲ್ಲ ನುಗ್ಗಿರಲು ಕಾವ್ಯತೇರು.

ದೇವಮಂದಿರದಲ್ಲಿ ಭಕ್ತಿಯಲಿ ನೆರವಾಗಿ
ನರನೆ ನಾರಾಯಣನ ಮೂರ್ತಿರೂಪ.
ಸತ್ಯಜೀವನ ನಡೆಸಿ ಸತ್ಯಕ್ಕೆ ತಲೆಬಾಗಿ
ಸಂಸ್ಕಾರ ತೈಲದಲಿ ಉರಿಸಿ ದೀಪ.

ಮುದ್ದು ಮಡದಿಯ ಮೌನ ಮನೆಯಲ್ಲಿ ತುಂಬಿರಲು
ಕರೆಯಬಾರದೆ ಒಮ್ಮೆ ಪದ್ಮ ಎಂದು.
ಸದ್ದು ಮಾಡದೆ ಜೀವ ನಿಮ್ಮನ್ನೆ ನಂಬಿರಲು
ಧರೆಗೆ ಉರುಳಿರೆ ಕೋಟಿ ಕಣ್ಣ ಬಿಂದು.

ಕೋಟಿ ಶಿಷ್ಯೋತ್ತಮರ ನಮನಗಳು ಸಂದಿರಲು
ಶಾಶ್ವತವು ಭುವಿಯೊಳಗೆ ಪಡೆದ ಕೀರ್ತಿ.
ಉರಿದ ಜ್ವಾಲೆಯ ದೀಪ ಕ್ಷಣದೊಳಗೆ ನಂದಿರಲು
ಮುಟ್ಟಲಾರೆವು ಮಟ್ಟ ಹೆಣಗಿ ಪೂರ್ತಿ.

ಮಹಿಳೆ ಮಕ್ಕಳ ಮೇಲೆ ಗೌರವವ ಇರಿಸಿರಲು
ದೊರಕಿರಲು ದೊರೆ ನಿಮಗೆ ಸ್ಥಾನ ಗಣ್ಯ.
ಜನರು ಕೊಂಡಾಡುತಿರೆ ಜನಮನವ ವರಿಸಿರಲು
ಇಂಥ ಶಿಕ್ಷಕ ಬರಲು ನಮ್ಮ ಪುಣ್ಯ.

ಮಕ್ಕಳೆಡೆಗಿನ ಪ್ರೀತಿ ನುಡಿಸುವಲಿ ತೋರಿರಲು
ಜಾತಿ ಮತಗಳ ಗಣನೆ ಇರದ ಭೇದ.
ಸಮತೆ ಕಲಿಸುವ ರೀತಿ ಮಕ್ಕಳಲು ತೂರಿರಲು
ಕಠಿಣ ಶಿಕ್ಷೆಯ ಸಹಿತ ನೀಡಿ ಬೋಧ.

ಬರುವ ಸಾವನು ತಿಳಿದು ಪೂರ್ವದಲೆ ಕೂಡಿರಲು
ವಸ್ತ್ರಧನ ವಸ್ತುಗಳು ಮಣ್ಣ ಕುಂಭ.
ಶವಕೆ ಹೊದೆಸುವ ವಸನ ಸಂಗ್ರಹಿಸಿ ಇಟ್ಟಿರಲು
ಸ್ವಾವಲಂಬನೆ ಮೆರೆದು ಕಣ್ಣ ತುಂಬ.

ದೇಹ ಸುಟ್ಟಿರೆ ಚಿತೆಯು ಸುಡುವುದೇ ನೆನಪುಗಳ
ಮನದ ಮಹಡಿಯ ನೀವು ಅಗಲಲಿಲ್ಲ.
ದಾಹ ಓದುವ ಮೋಹ , ಬೆಳೆಸುತಲಿ ಕನಸುಗಳ
ನನಸು ಮಾಡುವ ಛಲದ ಜ್ಞಾನ ಮಲ್ಲ.

ಕ್ಷಣದಲ್ಲಿ ಭಸ್ಮವನು ಮಾಡುವಲಿ ಚಿತೆಯಿತ್ತು
ಆಗಸವ ಮುಟ್ಟಿತ್ತು ಪ್ರಖರ ಬೆಂಕಿ.
ಹಿಂತಿರುಗಿ ಬರುವಾಗ ಮೌನವನು ಮುರಿದಿತ್ತು
ಗುಣಗಾನ ಮೀರಿತ್ತು ಸಿಗದೆ ಅಂಕಿ.

ಬಳಗ ನಿಂದಿರಲಿಂದು ಮೌನಕೇ ಶರಣಾಗಿ
ನೆನಪಿನಾಳದ ಚಿತ್ರ ಹೊರಕೆ ತೆಗೆದು.
ಕೊಳಗ ಕಣ್ಣೀರಮಳೆ ಸುರಿಸುತಲಿ ಬಂದಿಹರು
ಹುಟ್ಟಿಬರಲಿಂಥವರು ಮನದಿ ಬಗೆದು.7 ಕಾಮೆಂಟ್‌ಗಳು:

 1. ಸುಧಾಕಿರಣ್ ರವರೇ, ತಂದೆಗೆ ಕಾವ್ಯಮಯ ಶ್ರದ್ಧಾಂಜಲಿ ಬಹಳ ಚನ್ನಾಗಿ ಮೂಡಿದೆ...ನಿಮ್ಮ ತಂದೆಯವರ ಅಗಲಿದ ಆತ್ಮಕ್ಕೆ ಶಾಂತಿ ನೀಡಲಿ ಎನ್ನುವುದೇ ನಮ್ಮ ಪ್ರಾರ್ಥನೆಯೂ..

  ಪ್ರತ್ಯುತ್ತರಅಳಿಸಿ
 2. " ಹುಟ್ಟಿಬರಲಿಂಥವರು ಮನದಿ ಬಗೆದು " ....ಸದಾಶಾಯ ಫಲಿಸಲಿ ಎಂದು ಹಾರೈಸುತ್ತೇನೆ..

  ಪ್ರತ್ಯುತ್ತರಅಳಿಸಿ
 3. ತಮ್ಮ ಶ್ರಧ್ಧಾ೦ಜಲಿ ಮನ ಮಿಡಿಸಿತು. ತು೦ಬು ಆದರ್ಶ ಜೀವನ ನಡೆಸಿದ ಆ ಚೇತನದ ಹಾದಿ ನಮ್ಮ ಬಾಳಬುತ್ತಿಯಾಗಲಿ. ತಮ್ಮ ಕವನ ಅವರ ವ್ಯಕ್ತಿತ್ವವನ್ನು ಕಣ್ಣಿಗೆ ಕಟ್ಟುವ೦ತೆ ಚಿತ್ರಿಸಿ ತಮಗಾದ ತು೦ಬದ ನಷ್ಟದ ಅರಿವನ್ನು ಓದುಗರಿಗೆ ಮನದಟ್ಟು ಮಾಡಿದೆ. ಅವರಿಗೆ ನಮ್ಮ ಭಾವ ಶ್ರಧ್ದಾ೦ಜಲಿ.

  ಪ್ರತ್ಯುತ್ತರಅಳಿಸಿ
 4. ಶ್ರದ್ಧಾ೦ಜಲಿ ಕವಿತೆ ಓದಿ ಕಣ್ಣಲ್ಲಿ ಕ೦ಬನಿ ತು೦ಬಿ ಬ೦ತು.
  ನಿಮ್ಮ ಆಶಯ ನಿಜವಾಗಲಿ..ಅವರಿಗೆ ನಮ್ಮ ಅನ೦ತ ನಮನಗಳೊ೦ದಿಗೆ ಭಾವಪೂರ್ಣ ಶ್ರದ್ಧಾ೦ಜಲಿಗಳು.

  ಪ್ರತ್ಯುತ್ತರಅಳಿಸಿ
 5. ನಾವು ಓದುವಾಗ ಮೇಷ್ಟ್ರ ಗುಣಗಾನವನ್ನು ನಮ್ಮ ಗುರುರ್ಗಳಿಂದ ಕೇಳುತ್ತಿದ್ದೆವು. ನಮ್ಮೂರಿನ ಹೆಮ್ಮೆಯ ಮೇಷ್ಟ್ರು ನಮ್ಮನಗಲಿರುವುದು ಅತೀ ದುಃಖದ ಸಂಗತಿ. ಅವ್ರ ಆದರ್ಶ ನಮ್ಮದಾಗಲಿ. ಆ ದೇವರು ನಿಮಗೆ ನೋವನ್ನು ಭರಿಸುವ ಶಕ್ತಿ ನೀಡಲಿ. ಇಂತಹ ಮೇರು ವಕ್ತಿ ಇನ್ನೊಮ್ಮೆ ಹುಟ್ಟಿಬರಲಿ.

  ಪ್ರತ್ಯುತ್ತರಅಳಿಸಿ
 6. ಸುಧಾಕಿರಣ,
  ನಿಮಗೆ ಸಾಂತ್ವನ ಹೇಳಲು ಸಾಧ್ಯವೆ? ಕಾಲವು ನಿಮ್ಮ ದುಃಖವನ್ನು ಮಾಯಿಸಲಿ ಎಂದು ಹಾರೈಸುತ್ತೇನೆ.

  ಪ್ರತ್ಯುತ್ತರಅಳಿಸಿ
 7. ಸುಧಾಕಿರಣ್ ಅವರೆ ..
  ತುಂಬಾ ಸುಂದರ ಕವನ .. ಸುಮಾರವರದು ಅಕ್ಷರಾಂಜಲಿಯಾದರೆ ತಮ್ಮದು
  ಕಾವ್ಯಮಯ ಶ್ರದ್ಧಾಂಜಲಿ ..

  ಪ್ರತ್ಯುತ್ತರಅಳಿಸಿ