ಶಾಂತ ವಾತಾವರಣ
ಸುತ್ತಲೂ ಕಲ್ಲಿನ ಭದ್ರ ಆವರಣ
ಪಾಗಾರದ ಬಣ್ಣ ಕಾವಿ , ಮಡಿನೀರಿಗೊಂದು ಬಾವಿ.
ಬೇವು, ಬಿಲ್ವ,ಮುತ್ತುಗದ ಮರಗಳೇ ಸುತ್ತ
ಮಧ್ಯದಲ್ಲಿ ಎತ್ತರದ ಒಂದು ಹುತ್ತ
ಅಲ್ಲಲ್ಲಿ ತುಳಸಿ,ನೆಲ್ಲಿ ಪಾರಿಜಾತದ ಗಿಡಗಳು
ಅರ್ಚನೆಯಿಂದ ಕಂಗೊಳಿಸುವ ಬುಡಗಳು.
ತೇಲಿಬರುತ್ತಿರುವ ಭಕ್ತಿನಾಮದ ಇಂಪು
ಮಕರಂದ ಗಂಧವ ಉಜ್ಜುತ ಬೀಸುವ ಗಾಳಿಯ ತಂಪು
ಬೋಳುತಲೆಯ ವಟುಗಳ ಓಡಾಟ
ಮಂತ್ರಪಠಣದ ಪಾಠ.
ಹೊರಗೆ ಕವಿದಿದೆ ಭಕ್ತಿಯ ಮಂಜು
ಕಣ್ಣಿಗೆ ಕಾಣದ ನಂಜು
ಪೀಠ ಪಾಲಕ್ಕಿಗಳಲಂಕಾರ , ಹೊಮ್ಮುತ್ತಿದೆ ಓಂಕಾರ
ಪೀಠಕ್ಕೆ ಬಾಗಿಸಿಟ್ಟ ಮಂತ್ರದಂಡ
ಬಹುಪರಾಕಿಗೆ ನಿಂತ ಶಿಷ್ಯತಂಡ.
ಗುರುದರ್ಶನಕ್ಕೆ ಭಕ್ತರ ಸಾಲು,
ಅಲ್ಲಲ್ಲಿ ಹೊಳೆಯುತ್ತಿದೆ ವಿದ್ವಾಂಸರ ಶಾಲು.
ಮಣಿ, ಗಂಧ, ರುದ್ರಾಕ್ಷಿ - ಭಕ್ತಿಗೆ ಬೇಕೆ ಬೇರೆ ಸಾಕ್ಷಿ?
ಕಿವಿಗೆ ಅಪ್ಪಳಿಸುತಿದೆ ಭಕ್ತಿಯ ನದಿಯ ಭೋರ್ಗರೆತ
ಮುಕ್ತಿಯ ಮೊರೆತ.
ವಿಚಾರಿಗೂ ಬರುತ್ತದೆ ತಲೆತಿರುಕು
ಭಕ್ತಿಯ ಅಂಥ ಸರಕು!
ಆಶ್ರಮದ ತೇಜಸ್ಸಿನ ಸುಮುಖ
ನೋಡಿ ಕಾಮುಕನೂ ಆಗುವನು ವಿಮುಖ.
ಇಂತಿರಲು , ಪ್ರಾಕಾರದ ಒಳಗೆ ಬಂದಿದ್ದಾನೆ
ಒಬ್ಬ ಭಕ್ತ , ಪ್ರವೇಶ ಮುಕ್ತ .
ವೇದ ಶಾಸ್ತ್ರಗಳು ತಿಳಿದಿಲ್ಲ , ಜೀವನದಲೇನೂ ಉಳಿದಿಲ್ಲ
ಜಂಜಡಕೆ ಸಂಸಾರ ತ್ಯಜಿಸಿ ,ಮನದಿ ಸ್ವಾಮಿಯ ಭಜಿಸಿ
ಮುಕ್ತಿಗಾಗಿ ಬಂದಿದ್ದಾನೆ , ಮಠದೊಳಗೆ ನಿಂದಿದ್ದಾನೆ.
ಧ್ಯಾನಪೀಠದಲ್ಲಿ ಸ್ವಾಮಿ ಮಗ್ನ
ನಿಮಿರಿದ ಮೈ ನಗ್ನ
ನಾರಿಯಿಂದ ಮುಕ್ತಿಗೆ ದಾರಿ
ನಿರಂತರ ಮೈ ಒತ್ತು
ಉದುರುತ್ತಿರುವ ಮುತ್ತು.
ಹಗಲು, ತೆರಳಲು ಬೋಧನೆ
ರಾತ್ರಿ, ಕಾಮದ ವೇದನೆ
ರಾಸಲೀಲೆಗೆ ನಿವೇದನೆ ,
ಹಣದ ಅನುಮೋದನೆ.
ಪೀಠಬಿಟ್ಟು ಏರಿದ್ದಾನೆ ಮಂಚ
ತಲುಬಿನ ಪ್ರಪಂಚ
ಕುಪ್ಪಳಿಸುತ್ತಿದ್ದಾಳೆ ಸಿನೆಮಾ ತಾರೆ
ಜಾರುತ್ತಿದೆ ಆಕೆಯ ಸೀರೆ.
ಇಳಿಸಲವಳ ಉಬುಸ
ಕಳಚುತ್ತಿದ್ದಾನೆ ಕುಬುಸ
ಬೆಳಗಿ, ಅಣಿಮಾಡುತ್ತಾನೆ ಕಳಶವ ಕಾಮ ಪೂಜೆಗೆ.
ಧ್ಯಾನಪೀಠ - ಈಗ ಧಾನ್ಯಪೀಠ!
ಉತ್ತಲು , ಬಿತ್ತಲು ಹದಗೊಂಡಿದೆ ಗದ್ದೆ
ಶ್ರಮದ ಬೆವರಿಗೆ ಮೈ ಒದ್ದೆ.
ಹರಿಸಿ ನೋಟಿನ ಗರಿ
ಏರಿದ್ದಾನೆ ಪರಾಕಾಷ್ಠತೆಯ ಗಿರಿ
ಮುಗ್ಧಭಕ್ತರು ಯಾವಾಗಲೂ ಹರಕೆಯ ಕುರಿ.
ಕಾಮ ಕೊಸರಿತು ದಿಟ
ಕೆಸರಾಯಿತು ಮಠ.
ತೀರಿಸಿದ್ದಾನೆ ಅವಳ ಇಚ್ಚೆ
ಅಲ್ಲಿಗೆ ಸಂಪೂರ್ಣ ಉದುರಿತು
ನಿತ್ಯಾನಂದನ ಕಚ್ಚೆ.
ಇಷ್ಟಕ್ಕೂ , ಇಷ್ಟೆಲ್ಲಕ್ಕೂ ಅವನಿಗೆ ಮಠವೇ ಬೇಕಿತ್ತೆ?
ಬೇಕಿತ್ತು , ಬೆಲೆವೆಣ್ಣುಗಳ ಕರೆಸುವ ಅವನ ಮಠದ ತಾಕತ್ತು.
ಮುಕ್ತಿಗಾಗಿ ದರ್ಶನಕ್ಕೆ ಬಂದು ನಿಂತ
ಆ ಬಡಪಾಯಿ ವಿರಾಗಿ
ಓಡಿ , ಹೆಂಡತಿಯ ಪುನಃ ಸೇರಿ ಮರುಗಿ,
ನಿರ್ಧಾರಕ್ಕೆ ಬಂದಿದ್ದಾನೆ
ಬಿಡದೀ ಮಾಯೆ ಮಡದೀ ಕಾಯೆ.
ಅದ್ಭುತವಾದ ಕವನ. ನವ್ಯ-ಮತ್ತು ಪ್ರಾಸ ಗಳ ಅಪೂರ್ವ ಸ೦ಯೋಜನೆಯ ವಿನೂತನ ಪ್ರಯೋಗದ ಕವನ. ಕಾವಿಯುಟ್ಟು ಮೈಲಿಗೆ ಮಾಡಿದ ನಿತ್ಯಾನ೦ದನ ಕೃತ್ಯ ಅನಾವರಣ ಚೆನ್ನಾಗಿದೆ.
ಪ್ರತ್ಯುತ್ತರಅಳಿಸಿಮಾರ್ಮಿಕವಾಗಿದೆ. Nice.
ಪ್ರತ್ಯುತ್ತರಅಳಿಸಿಮುಕ್ತ ಛಂದಸ್ಸಿನ ಸುಂದರ ಬಳಕೆ. ಮನ ಸೆಳೆಯುವ ವಿಡಂಬನೆ.
ಪ್ರತ್ಯುತ್ತರಅಳಿಸಿ