ಮಂಗಳವಾರ, ಸೆಪ್ಟೆಂಬರ್ 7, 2010

ಗ್ರಹಣ ವಿಜ್ಞಾನ

ಬಾನಿನಂಗಳದಲ್ಲಿ ಚಣಕಾಲ ನಡೆಯುವುದು
ನೆಳಲು ಬೆಳಕಿನ ಚೆಲುವ ಆಟ
ನಯನಗಳ ಎದುರಿನಲಿ ನಯವಾಗಿ ತೋರುವುದು
ಗಗನ ವೈವಿಧ್ಯದಾ ಸವಿಯ ಊಟ.


ಯಾವುದೋ ವೇಗದಲಿ ಯಾವುದೋ ಜಾಗದಲಿ
ಸಂಧಿಸಲು ಕಾಯಗಳ ದಿನದ ಪಯಣ
ಸೇರುವಾ ದಿನಬರಲು ಸಂತಸದ ಸವಿತರಲಿ
ಗ್ರಹಣ ಗಗನದೆಡೆಗೆ ಹರಿವ ನಯನ.


ಭೂಮಿ ಸೂರ್ಯನ ನಡುವೆ ಚಂದ್ರ ಕುಣಿಯುತ ಬರಲು
ಸೇರುತಲಿ ಕಾಯಗಳು ಸರಳರೇಖೆ
ಚಂದ್ರನಾ ಇಡಿನೆರಳು ಭೋಮಿಯಲಿ ಬಿದ್ದಿರಲು
ಗ್ರಹಣದಧ್ಯಯನಕ್ಕೆ ತೆರೆದಶಾಖೆ.

ಅಡ್ಡನಾಗಲು ಚಂದ್ರ ರವಿಯ ಮರೆಯಾಗಿಸುತ
ಅರ್ಧಭೂಮಿಯ ಮೇಲೆ ಹಗಲುಮಾಯ
ನೆಳಲು ಬೆಳಕಲಿ ನಡೆವ ಚಿತ್ರವೈಚಿತ್ರ್ಯಕೆ
ಚಲನೆ ಕಾರಣ ಮೂಲ ಗಗನಕಾಯ.

ಗ್ರಹಣವಾಗುವ ಮೊದಲು ಬೆಳಕ ದೋಣಿಯನೇರಿ
ಯಾರೊ ಬಂದರು ನೆರಳ ಪರದೆ ಹಿಡಿದು
ಗ್ರಹಣ ಕರಗಲು ಹಿಡಿಯೆ ವಜ್ರದುಂಗುರ ತೋರಿ
ಮುಂದೆ ನಡೆದರು ಬೆಳಕ ಪ್ರೀತಿ ಮಿಡಿದು.

ಬೆಳಕ ಕಾಯಗೆ ಬೇಕು ಗ್ರಹಣವಾಗಲು ತಡೆಯು
ಅದಕೆ ಉಪಗ್ರಹದ ಬಲ ಸನಿಹವಿರಲು
ತಡೆಯು ಇಲ್ಲದೆ ಗ್ರಹಣ ಬರಿದೆ ನಿತ್ಯದ ಭ್ರಮಣ
ಸೊಗಸ ಸಂಪೂರ್ಣತೆಯು ಕೊರಗುತಿರಲು.

ಜಗದ ಕಾಯಕ ನಿತ್ಯ ಗಗನ ಕಾಯದ ಸತ್ಯ
ತಿಳಿಸುವುದು ಈ ತೆರನ ವಿದ್ಯಮಾನ
ಸಿಗಲು ಮಾಹಿತಿ ಇಂಥ ಸರಿಯುವುದು ಕತೆ ದಂತ
ಅಳಿಸುವುದು ಮೌಢ್ಯವನು ನೀಡಿ ಧ್ಯಾನ.

ಮೌಡ್ಯ ನಂಬಲುಬೇಡಿ ಸೂಕ್ಷ್ಮತನದಲಿ ನೋಡಿ
ರವಿಯ ನುಂಗಲು ಬಹನು ಕೇತುವಲ್ಲ
ಮೂಲ ಬೆಳಕಿನ ನಡುವೆ ಮರೆ ಇರಿಸುವಾ ನೆರಳು
ಗ್ರಹಣವಾಗಲು ಕೇತು ಹೇತುವಲ್ಲ.

ಬರಿಯ ಕಣ್ಣಲಿ ರವಿಯ ನೋಡುವುದು ನಿಲ್ಲಿಸಿರಿ
ಪ್ರಖರ ಬೆಳಕಿನ ಕಿರಣ ಸುಡಲು ಸಾಕು
ಪರಿಸರದ ಮೇಲೆಲ್ಲ ಪರಿಣಾಮ ಬೀರಿದರೆ
ಎಂದಿನಂತೆಯೆ ಬಾಳು ನಡೆಸಬೇಕು.

4 ಕಾಮೆಂಟ್‌ಗಳು:

  1. ಒಂದು ವೈಜ್ಞಾನಿಕ ಸತ್ಯವನ್ನು ಕವನರೂಪದಲ್ಲಿ ಚಂದವಾಗಿ ಹಿಡಿದಿದ್ದೀರಿ. ಅಭಿನಂದನೆಗಳು.

    ಪ್ರತ್ಯುತ್ತರಅಳಿಸಿ
  2. ವೈಜ್ಞಾನಿಕ ಸತ್ಯದಲ್ಲಿ ಗ್ರಹಣದ ಅದ್ಭುತ ಕ್ರಿಯೆಯನ್ನು ಕಾವ್ಯಾತ್ಮಕವಾಗಿ ಸುಂದರವಾಗಿ ನಿವೇದಿಸಿದ್ದಿರಾ! ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  3. ಗ್ರಹಣದ ಅದ್ಭುತ ಕ್ರಿಯೆ ನಿಮ್ಮ ಕವನದಲ್ಲಿ ಸೆರೆಯಾದ ರೀತಿಗೆ ಭಲೇ

    ಸುಂದರವಾಗಿ ಅದನ್ನು ಬರೆದಿದ್ದಿರಾ

    ಪ್ರತ್ಯುತ್ತರಅಳಿಸಿ
  4. ಸುಧಾಕಿರಣ್ ಸರ್, ಗ್ರಹಣದ ಕವನ ರೂಪ ಚನ್ನಾಗಿದೆ... ಇಂತಹ ವಿಷಯಗಳನ್ನು ಮಕ್ಕಳಿಗೆ ತಲುಪಿಸಿ ಅರ್ಥೈಸಲು ಕವನ ಮತ್ತು ಲಯಬದ್ಧ ಹಾಡು ಪ್ರಭಾವಶಾಲಿ ಎನ್ನುವುದು ವಿದಿತ.

    ಪ್ರತ್ಯುತ್ತರಅಳಿಸಿ