ಗುರುವಾರ, ನವೆಂಬರ್ 26, 2009

ಪೇಪರ್ ಬಾಯ್

ಶಾಲೆಗೆ ಹೋಗಬೇಕು ಹಗಲು
ನೀಡಬೇಕು ಮನೆಕೆಲಸಕ್ಕೆ ಹೆಗಲು
ದಿನದ ಹೋಂವರ್ಕ್ ಮಾಡಿ
ಮುಗಿಸಿ ಊಟ
ಕೇಳಿ ಜಗಳದ ಕಾಟ
ರಾತ್ರಿ ಮಲಗುವುದೇ ಲೇಟು
ಮಾಡಿ ಹೊದಿಕೆಯ ಬೈಟು.

ಆಯಾಸಕ್ಕೆ ಕಣ್ತುಂಬ ನಿದ್ದೆ
ಮೈಕೈ ಸೇರಿ ಮುದ್ದೆ
ಸವಿಯಲು ರುಚಿಯ ಕನಸು
ತೃಪ್ತ ಸುಪ್ತ ಮನಸು.

ನಿದ್ದೆಯ peak ನಸುಕಿನ ಜಾವ
all-out-ಮುಸುಕಿನ ಜೀವ
ಹೊಡೆಯಿತು ಮಿತ್ರನ ಸೈಕಲ್ ಗಂಟೆ
ಇನ್ನು ಮಲಗುವುದು ಉಂಟೆ

ಎದ್ದು ಕಣ್ಣುಜ್ಜಿ ಹೊರಡಬೇಕು
ತೌರ ತೊರೆದು ತೆರಳುವ ತರಳೆಯಂತೆ
ದೂರದಲ್ಲಿ ಓದುತ್ತಿರುವ ಮಗ ಅಪರೂಪಕ್ಕೆ
ಬಂದು ಪುನಃ ಹಿಂದಿರುಗುವಂತೆ
ಒಲ್ಲದ ಮನಸ್ಸು, ಆದರೂ ನಿಲ್ಲಿಸುವುದುಂಟೆ
ಕುಟುಂಬ ದೇವತೆಗೆ ಕೊಡುವ
ಬದುಕ ಯಜ್ಞದ ಹವಿಸ್ಸು

ಸ್ವಗತ-ಪೇಪರ್ ಆಫೀಸಿಗೆ ಬಾಂಬ್ ಬಿದ್ದಿದ್ದರೆ
ಧಾರಾಕಾರ ಮಳೆ ಸುರಿದು ಪೇಪರ್ ವ್ಯಾನ್ ಮುಳುಗಿದ್ದರೆ
ಕಂಪಿಸಿ ಭೂಮಿ ಕುಸಿದಿದ್ದರೆ ಕಾರ್ಯ ಸ್ಥಗಿತ,
ಮಲಗಬಹುದಿತ್ತು ಇನ್ನೂ
ಮೈಮುರಿದು ಬೆನ್ನು

ಇಲ್ಲ , ಬದುಕ ದಿಕ್ಕು ದಿಕ್ಕಿನ ತದುಕು
ಸರಾಯಿ ತುಂಬಿದ ಅಪ್ಪನ ಬಾಯಿ
ಶಾಲಾಶುಲ್ಕ , ತಂಗಿಯ ಓದು
ಅಮ್ಮನ ಔಷಧಿ , ಅಪ್ಪನ ವ್ಯಾಧಿ
ಹೀಗೆ ಬರುವುದು ನೆನಪು , ಕೆಲಸಕ್ಕೆ ದಾಪು।
ಇನ್ನು ಮಲಗುವುದೇ?
ತೊಲಗುವುದೇ........
ಕೊರೆವ ಚಳಿ , ಎಳೆವ ಬದುಕಿನ ಸುಳಿ
ಸಮಸ್ಯೆಗಳ ತೂರಿ , ಸೈಕಲ್ ಏರಿ ಹೊರಟು
ರಸ್ತೆಯ ಒರಟು,
ಕ್ಷಣದಲ್ಲಿ ಸೇರಬೇಕು
ಪೇಪರ ವಿತರಕ ಶಿವಣ್ಣ
ಹೀಗೆ ಕಷ್ಟಪಟ್ತು ಬೆಳೆದ ನಮ್ಮಣ್ಣ.
ಕ್ಯಾರಿಯರ್ ಸೇರಿದ ಪೇಪರ್ ಕಟ್ಟು
ತುಳಿಯಲು ಹರಿದ ಮೆಟ್ಟು
ದಿನದ ಸಂಚಿಕೆ , ಮನೆಮನೆಗೆ ಹಂಚಿಕೆ
ಹಂಚುವ ವೇಗ ಕೆಲವು ಗೇಟಿಗೆ ಬೀಗ
ಗೇಟ್ ಹಾರಲು ಬೈಗುಳಗಳು ತೂರಲು
ಎತ್ತರಕ್ಕೆ ಪೇಪರ್ ಎಸೆದರೆ
ಗೋಡೆಗೆ ತಾಗಿ ವಾಪಾಸು
ಕರ್ಣನಂತೆ ನಾನು- ಬಿಟ್ಟಬಾಣ ತೊಡುವಂತಿಲ್ಲ
ಮೂರುನಾಲ್ಕನೆಯ ಮಹಡಿ
ಏರಬೇಕು ಗೃಹ ಪಹಡಿ
ಇನ್ನೆನು ಹೊರಡಬೇಕು , ಹೊಸ್ತಿಲಿಗೆ ಪೇಪರ್ ಇಟ್ಟು
ಹಿಡಿಯುವುದು ಯಜಮಾನನ ಬೈಗುಳದ ಪೆಟ್ಟು
ಯಾಕೆ ಲೇಟು? ನಾಯಿ ಥೇಟು
ಎಲ್ಲರಿಗೂ ಬೇಕು ಗಂಟೆ ಆರಕ್ಕೆ
ಇಲ್ಲದಿದ್ದರೆ ಸುತ್ತಿಕೊಳ್ಳಬೇಕು ಬೈಗುಳಗಳ ದಾರಕ್ಕೆ
ನಾನಾ ಪತ್ರಿಕೆ ನೂರಾರು ಮನೆಗೆ
ತಲುಪಿಸಿ ತಿನ್ನಬೇಕು ಬೈಗುಳಗಳ ಕೊನೆಗೆ
ತಟ್ಟ ಬೇಕು ಮನೆಮನೆಯ ಕದ
ಕೇಳಬೇಕು ಲೇಟ್ ಎಂಬ ಪದ
ಸುರಿವ ಮಳೆ , ರಸ್ತೆಯಲ್ಲೇ ಹರಿವ ಹೊಳೆ
ಅಟ್ಟಿಸಿಕೊಂಡು ಬರುವ ಬೀದಿ ನಾಯಿ
ಮುಚ್ಚಿಕೊಂಡಿರಬೇಕು ನಮ್ಮ ಬಾಯಿ....

4 ಕಾಮೆಂಟ್‌ಗಳು:

  1. ಕಿರಣ್, ಹಿಂದೆ ಕಾಮೆಂಟ್ ಹಾಕಿದಾಗ ನೋಡಲಿಲ್ಲ ಕ್ಷಮಿಸಿ, ನಿಮ್ಮ ಕವನಸಂಕಲನದ ಬಿಡುಗಡೆಗೆ ಅಭಿನಂದನೆಗಳು. ನಿಮ್ಮ ಚುಟುಕು ಸಾಲುಗಳ ಇಂಧನ ಕುರಿತ ಕವನ ಸೂಪರ್...ಪದ ಬಳಕೆ ನನಗೆ ಬಹುವಾಗಿ ಮೆಚ್ಚುಗೆಯಾಯಿತು...ನಾನಂತೂ ಕೆಲವೊಮ್ಮೆ ತಡಕಾಡುತ್ತೇನೆ ಪದಗಳಿಗೆ..ಸಿಕ್ಕರೆ ಸರಿ..ಸಿಗದಿದ್ದರೆ...ಅವಸರದಲ್ಲಿ ಲೂಸು ಲೂಸಾಗಿ ಲಾಡಿ ಕಟ್ಟಿ ಸ್ಕೂಲಿಗೆ ಹೋಗುವಾಗ ಕಳಚಿಬೀಳುವ ನಿಕ್ಕರನ್ನು ಹಿಡಿದುಕೊಳ್ಳುವ ಹುಡುಗನಂತಾಗುತ್ತೆ ಮನಸ್ಥಿತಿ...
    ಪೇಪರ್ ಬಾಯ್...ಜೀವನದ ಸುತ್ತಲ ಕತ್ತಲ-ಮೆಟ್ಟಿಲು ಹಂತ ಹಮ್ತವಾಗಿ ಏರಿಹೋಗಿದ್ದೀರಿ...ಬಹಳ ಚನ್ನಾಗಿ ಮುಟ್ಟಿಸಿದ್ದೀರಿ...ಮನಕ್ಕೆ..ಮಾತನ್ನ...

    ಪ್ರತ್ಯುತ್ತರಅಳಿಸಿ
  2. ಕಿರಣ್...

    ಅಂದು ಚಿಟ್ಟಾಣಿಯವರ ಅಭಿನಂದನಾ ಸಭೆಯಲ್ಲಿ ನಿಮ್ಮ ಮಾತು, ಕವನ ಭಾಷಣ ಕೇಳಿ ನಿಮ್ಮ ಅಭಿಮಾನಿಯಾಗಿಬಿಟ್ಟಿದ್ದೇನೆ...

    ನಿಮ್ಮ ಕವಿತೆಯಲ್ಲಿ ಆಪ್ತತೆ ಇದೆ..
    ಭಾವಗಳು ಬಹಳವಾಗಿ ಮನ ತಟ್ಟುತ್ತವೆ..
    ಅನುಭವಿಸಿ ಬರೆದರೆ ಮಾತ್ರ ಇದು ಸಾಧ್ಯ...

    ಮತ್ತೆ, ಮತ್ತೆ ಓದ ಬೇಕೆನಿಸುತ್ತದೆ...

    ಅಭಿನಂದನೆಗಳು...

    ನಾಗಂದಿಗೆಯಲ್ಲಿ ಇನ್ನೂ ಬಹಳಷ್ಟಿವೆ..
    ಒಂದೊಂದಾಗಿ ತೆಗೆಯುತ್ತಿರಿ...

    ಪ್ರತ್ಯುತ್ತರಅಳಿಸಿ
  3. ಸುಧಾಕಿರಣ,
    ಬದುಕಿನ ಬವಣೆಯನ್ನು ಹಗುರಾಗಿ ಬಿಚ್ಚಿಡುವ ಕವನ ಚೆನ್ನಾಗಿದೆ. ನಿಮ್ಮ ನಾಗಂದಿಗೆಯಿಂದ ಇನ್ನಿಷ್ಟು ಕವನಗಳು ಹೊರಬರಲಿ.

    ಪ್ರತ್ಯುತ್ತರಅಳಿಸಿ
  4. ತು೦ಬಾ ಸರಳ ಶೈಲಿಯಲ್ಲಿ ಶಬ್ದಗಳನ್ನ ಲೀಲಾಜಾಲವಾಗಿ ಹೊಸೆದು ಭಾವಗಳ ಭರಪೂರ ಅಲೆಯಲ್ಲಿ-ಪೇಪರಬಾಲನ ಬದುಕು ಬಿಚ್ಚಿಟ್ಟಿರುವಿರಿ-ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ